ಮಂಗಳೂರು, ಮೇ. 06 : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಹಾಗೂ ಶಾಸಕರ ಪ್ರಮಾಣವಚನ ಸ್ವೀಕಾರ ವಿಳಂಬವಾಗುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯು ವಿಶ್ವಾಸದ ಮೇಲೆ ನಡೆಯಬೇಕು, ವಿಶ್ವಾಸವಿಲ್ಲದಿದ್ದರೆ ವ್ಯವಸ್ಥೆ ಬಲಿಷ್ಠವಾಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಪ್ರಮಾಣವಚನಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ವಿಳಂಬ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ನಾನು ಬೆಂಗಳೂರಿನಲ್ಲಿದ್ದ ಅವಧಿಯಲ್ಲಿ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ನಿನ್ನೆಯಷ್ಟೇ ಸಮಯ ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಇದೊಂದು ವಿಶಿಷ್ಟ ಸನ್ನಿವೇಶವಾಗಿದ್ದು, ತಾಂತ್ರಿಕ ವಿಚಾರಗಳ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ” ಎಂದರು.ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರದ ಕಾನೂನು ಹೋರಾಟಕ್ಕೂ ನನಗೂ ಸಂಬಂಧವಿಲ್ಲ. ಈ ವಿಚಾರದಲ್ಲಿ ಆತುರಪಡುವುದು ಅಥವಾ ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಖಾದರ್ ಕಿವಿಮಾತು ಹೇಳಿದರು. ಇದೇ ವೇಳೆ ರಾಜ್ಯಪಾಲರು ತಮಗೆ ಕರೆ ಮಾಡಿ ಮಾತನಾಡಿರುವುದನ್ನು ಖಚಿತಪಡಿಸಿದ ಸ್ಪೀಕರ್, ಈ ಪ್ರಕ್ರಿಯೆಯಲ್ಲಿ ಯಾವುದೇ ತಡೆ ಉಂಟುಮಾಡುವ ಉದ್ದೇಶ ತಮಗಿಲ್ಲ ಎಂದರು. ಅಲ್ಲದೆ, ಈ ಇಡೀ ಪ್ರಕರಣದಲ್ಲಿ ಎಲ್ಲಿ ಮತ್ತು ಯಾರಿಂದ ತಪ್ಪಾಗಿದೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

