ಅಡ್ಕರೆ ಪಡ್ಪು: ಸಂಘಟನೆಗಳು ಸಮಾಜದ ಏಳಿಗಾಗಿ ಕಾರ್ಯನಿರ್ವಹಿಸಿ, ಸರ್ಕಾರದ ಉತ್ತಮ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗಳಿಗೂ ತಲುಪಿಸುವ ಸೇತುವೆಯಾಗಬೇಕು ಎಂದು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಡ್ಕರೆಯ ಅಧ್ಯಕ್ಷ ಅಬ್ದುಲ್ ಖಾದರ್ ಹೇಳಿದರು.

ಅವರು ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಅಡ್ಕರೆ ಪಡ್ಪು ಹಾಗೂ ಭಾರತೀಯ ಅಂಚೆ ಇಲಾಖೆ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾದ ಸುಕನ್ಯಾ ಸಮೃದ್ಧಿ ಯೋಜನೆ ನೋಂದಣಿ ಹಾಗೂ ಆಧಾರ್ ತಿದ್ದುಪಡಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರಿಗೆ ಉಪಯುಕ್ತ ಸೇವೆಗಳನ್ನು ತಲುಪಿಸುವಲ್ಲಿ ಅಲ್ ಇಹ್ಸಾನ್ ಸಂಘಟನೆ ಮಾದರಿಯಾಗಿದೆ. ಇಂತಹ ಸಂಘಟನೆಗಳು ಪ್ರತಿಯೊಂದು ಊರಲ್ಲೂ ಸ್ಥಾಪನೆಯಾಗಬೇಕು. ಯುವಕರು ತಪ್ಪು ದಾರಿಯಲ್ಲಿ ಹೋಗದಂತೆ ತಡೆದು, ಅಹ್ಲು ಸುನ್ನತ್ ಆಶಯದಂತೆ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಅಲ್ ಇಹ್ಸಾನ್ ಅಧ್ಯಕ್ಷ ಎಂ. ಸಿರಾಜ್ ಅಡ್ಕರೆ ಮಾತನಾಡಿ, ಸಂಘಟನೆಯು ಪ್ರಾರಂಭದಿಂದಲೇ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಸದಸ್ಯರ ಒಗ್ಗಟ್ಟು, ಶ್ರಮ ಹಾಗೂ ಅನಿವಾಸಿ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.
ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಎಲ್ಲರೂ ಪಡೆಯುವಂತೆ ಮುಂದೆಯೂ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದು, ಅವುಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜನಾಬ್ ಶೌಕತ್ ಅಲಿ, ಭಾರತೀಯ ಅಂಚೆ ಇಲಾಖೆ ಮಂಗಳೂರು ವಲಯದ ಮಾರ್ಕೆಟಿಂಗ್ ಮುಖ್ಯಸ್ಥ ಸುಭಾಸ್ ಪಿ. ಸಾಲಿಯಾನ್, ಎಂ.ಜೆ.ಎಂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ, ಉಸ್ತುವಾರಿ ರಹೀಂ ಸೈಟ್, ಹನೀಫ್ ಮುಲಾರ್, ನಝೀರ್ ಅಬ್ದುಲ್, ಮಹಮ್ಮದ್ ಸಿರಾಜ್, ನಿಯಾಝ್ ಕಟ್ಟೆಮನೆ, ಹನೀಫ್ ಮೈಸೂರು, ರವೂಫ್ ಮುಲಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ನಝೀರ್ ಅಬ್ದುಲ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮಹಮ್ಮದ್ ಸಿರಾಜ್ ಧನ್ಯವಾದ ಸಲ್ಲಿಸಿದರು.


