ಮಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹993 ಏರಿಕೆ ಮಾಡಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಸಣ್ಣ ಉದ್ಯಮಿಗಳು ಮತ್ತು ಹೋಟೆಲ್ ಮಾಲೀಕರ ಬದುಕನ್ನು ಬೀದಿಗೆ ತಳ್ಳುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಈ ಸಮಯದಲ್ಲಿ, ಒಂದೇ ಬಾರಿ ಸಾವಿರ ರೂಪಾಯಿಯಷ್ಟು ಬೆಲೆ ಏರಿಸುವುದು ಜನಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ. ಇದು ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದ ‘ಅಚ್ಛೇ ದಿನ’ (ಒಳ್ಳೆಯ ದಿನಗಳು) ಹೀಗಿರುತ್ತದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ, ಕಾಫಿ ಮತ್ತು ಊಟದ ದರಗಳು ಏರಿಕೆಯಾಗುವುದು ಅನಿವಾರ್ಯವಾಗಿದೆ. ಇದರಿಂದಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿ, ಹೋಟೆಲ್ ಉದ್ಯಮವನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಲೆ ಏರಿಕೆ ಹಿಂಪಡೆಯದಿದ್ದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಯುವ ಕಾಂಗ್ರೆಸ್ ಎಚ್ಚರಿಸಿದೆ.
ಕೇಂದ್ರ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳಿಗೆ ಮಣೆ ಹಾಕುವುದನ್ನು ಬಿಟ್ಟು, ಸಾಮಾನ್ಯ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಕೂಡಲೇ ಈ ಬೆಲೆ ಏರಿಕೆಯನ್ನು ಹಿಂಪಡೆಯಬೇಕು” ಎಂದು ಇಬ್ರಾಹಿಂ ನವಾಝ್ ಆಗ್ರಹಿಸಿದ್ದಾರೆ.

