ಬೆಂಗಳೂರು, ಏ. 27:ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಉಗ್ರ ಶಾರಿಕ್ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್ಐಎ ಸ್ಪೆಷಲ್ ಕೋರ್ಟ್ ಆದೇಶ ಹೊರಡಿಸಿದೆ.

2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಆರೋಪಿ ಶಾರಿಕ್ ಬಾಂಬ್ ಹೊತ್ತು ಸಾಗಿಸುತ್ತಿದ್ದಾಗಲೇ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿತ್ತು. ಈ ಘಟನೆಯಲ್ಲಿ ಶಾರಿಕ್ ಮತ್ತು ಆಟೋ ಚಾಲಕ ಗಾಯಗೊಂಡಿದ್ದರು. ದೇಶದ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲಾಗಿತ್ತು.ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯವು, ಆರೋಪಿ ವಿರುದ್ಧದ ಸಾಕ್ಷ್ಯಗಳನ್ನು ಪುರಸ್ಕರಿಸಿದೆ. ಶಾರಿಕ್ ವಿರುದ್ಧ ಹಲವು ಸೆಕ್ಷನ್ಗಳ ಅಡಿಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ.ಐಪಿಸಿ ಸೆಕ್ಷನ್ 121ಎ (ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವ ಸಂಚು) ಐಪಿಸಿ ಸೆಕ್ಷನ್ 122 (ಯುದ್ಧ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರ ಸಂಗ್ರಹಣೆ) ಐಪಿಸಿ ಸೆಕ್ಷನ್ 326 (ಮಾರಕ ಆಯುಧಗಳಿಂದ ಗಂಭೀರ ಗಾಯಗೊಳಿಸುವುದು) ಯುಎಪಿಎ (UAPA)(ಭಯೋತ್ಪಾದನಾ ಚಟುವಟಿಕೆಗಳ ತಡೆ ಕಾಯ್ದೆಯಡಿ ಕಠಿಣ ಶಿಕ್ಷೆ).2022ರಲ್ಲಿ ಮಂಗಳೂರಿನ ಕಂಕನಾಡಿ ರೈಲ್ವೆ ನಿಲ್ದಾಣದ ಸಮೀಪವಿರುವ ನಾಗುರಿ ಎಂಬಲ್ಲಿ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಭಾರಿ ಸದ್ದು ಕೇಳಿಬಂತು. ಅದು ಸಾಮಾನ್ಯ ಸ್ಫೋಟವಾಗಿರಲಿಲ್ಲ; ಅದೊಂದು ವ್ಯವಸ್ಥಿತವಾಗಿ ರೂಪಿಸಲಾಗಿದ್ದ ಐಇಡಿ (IED) ಬಾಂಬ್ ಸ್ಫೋಟ. ಈ ಘಟನೆಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕ ಮೊಹಮ್ಮದ್ ಶಾರಿಕ್ ಮತ್ತು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು.ಪೊಲೀಸರು ತನಿಖೆ ಆರಂಭಿಸಿದಾಗ ಆಟೋದಲ್ಲಿ ಸುಟ್ಟುಹೋಗಿದ್ದ ಪ್ರೆಶರ್ ಕುಕ್ಕರ್ ಪತ್ತೆಯಾಯಿತು. ಅದರೊಳಗೆ ಡಿಟೋನೇಟರ್, ಸರ್ಕ್ಯೂಟ್ ಮತ್ತು ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಆತ್ಮಾಹುತಿ ಬಾಂಬ್ ಇದ್ದಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಶಾರಿಕ್ ತನ್ನ ಬಳಿ ಹುಬ್ಬಳ್ಳಿಯ ‘ಪ್ರೇಮರಾಜ್’ ಎಂಬುವವರ ಹೆಸರಿನ ನಕಲಿ ಆಧಾರ್ ಕಾರ್ಡ್ ಇಟ್ಟುಕೊಂಡಿದ್ದನು, ಶಾರಿಕ್ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ಅಲ್ಲಿಯೇ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಅಳವಡಿಸಿದ್ದನು ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು.ಪ್ರಕರಣದ ಮಹತ್ವವನ್ನು ತಿಳಿದ ಕೇಂದ್ರ ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿತು. ಶಾರಿಕ್ ಕೇವಲ ಒಬ್ಬ ಅಪರಾಧಿಯಲ್ಲ, ಆತ ಐಸಿಸ್ ಉಗ್ರ ಸಂಘಟನೆಯಿಂದ ಪ್ರೇರಿತನಾಗಿ ರಾಜ್ಯಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಬಯಲಾಯಿತು. ಮಂಗಳೂರಿನ ಕದ್ರಿ ದೇವಸ್ಥಾನ ಅಥವಾ ಜನನಿಬಿಡ ಪ್ರದೇಶವೇ ಆತನ ಗುರಿಯಾಗಿತ್ತು ಎಂಬ ಶಂಕೆ ವ್ಯಕ್ತವಾಗಿತ್ತು.ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯವು ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆಯನ್ನು ಪೂರ್ಣಗೊಳಿಸಿ ಇಂದು ಅಂತಿಮ ತೀರ್ಪು ನೀಡಿದೆ.

