ಕುತ್ತಾರು: ಮುನ್ನೂರು ಸುಭಾಷ್ ನಗರದ ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಹೇಮಾವತಿ ಅವರ ಮನೆಯ ದುರಸ್ತಿ ಕಾರ್ಯವನ್ನು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಮಾನವೀಯತೆಯ ದೃಷ್ಟಿಯಿಂದ ಕೈಗೊಂಡಿದೆ.

ನಾದುರಸ್ತಿಯಲ್ಲಿದ್ದ ಮೇಲ್ಛಾವಣಿ , ಗೋಡೆಗಳು ಸಾರಣೆ ಕಾಣದೇ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಭೀತಿ ಆವರಿಸಿತ್ತು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಿಗಾಗಿ ಕಾದು ಕುಳಿತಿದ್ದ ಹೇಮಾವತಿ ಅವರ ಕುಟುಂಬಕ್ಕೆ ಈ ಪ್ರತಿಷ್ಠಾನ ನಿಜವಾದ ಆಶಾಕಿರಣವಾಗಿ ಹೊರಹೊಮ್ಮಿದೆ.

ಸಮಾಜ ಸೇವೆಯೇ ಧ್ಯೇಯವನ್ನಾಗಿಸಿಕೊಂಡಿರುವ ಭಗತ್ ಸಿಂಗ್ ಸೇವಾ ಪ್ರತಿಷ್ಠಾನವು, ತನ್ನ ಸದಸ್ಯರು ಹಾಗೂ ಹಿತೈಷಿ ದಾನಿಗಳ ಸಹಕಾರದಿಂದ ಮನೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿದೆ. ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು ಅವರ ನೇತೃತ್ವದಲ್ಲಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಸೇರಿದಂತೆ ಸರ್ವ ಸದಸ್ಯರು ಶ್ರಮದಾನದಲ್ಲಿ ತೊಡಗಿ, ಮನೆಯ ಮೇಲ್ಛಾವಣಿ ಬದಲಾವಣೆ, ಗೋಡೆಗಳ ಬಲಪಡಿಸುವಿಕೆ ಮತ್ತು ಮೂಲಭೂತ ಸೌಲಭ್ಯಗಳ ವ್ಯವಸ್ಥೆಗೆ ಮುಂದಾಗಿದ್ದಾರೆ.
ಸಮಾಜದಲ್ಲಿ ಬಡತನದಿಂದ ಬಳಲುತ್ತಿರುವವರ ಬದುಕಿಗೆ ಬೆಂಬಲ ನೀಡುವುದು ಪ್ರತಿಷ್ಠಾನದ ಜವಾಬ್ದಾರಿ. ಸದಸ್ಯರ ಶ್ರಮ, ಹಿತೈಷಿ ದಾನಿಗಳ ಸಹಕಾರವೇ ಇಂತಹ ಕಾರ್ಯಗಳಿಗೆ ಬಲ ನೀಡುತ್ತದೆ. ಭಗತ್ ಸಿಂಗ್ ಸೇವಾ ಪ್ರತಿಷ್ಠಾನವು ತೊಕ್ಕೊಟ್ಟು ಭಾಗದಲ್ಲಿ ಆಂಬ್ಯುಲೆನ್ಸ್ ಸೇವೆಯ ಮೂಲಕವೂ ಮನೆಮಾತಾಗಿತ್ತು. ಜೊತೆಗೆ ಕಳೆದ ಹಲವು ವರ್ಷಗಳಿಂದ ಮಾನವೀಯ ಹಾಗೂ ಪರಿಸರಪೂರಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಬಡವರಿಗೆ ಮನೆ ದುರಸ್ತಿ, ಅಗತ್ಯ ಸಹಾಯ, ಆರೋಗ್ಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಷ್ಠಾನದ ಸೇವೆ ಗಮನಾರ್ಹವಾಗಿದೆ.
ಈ ರೀತಿಯ ಸೇವಾ ಚಟುವಟಿಕೆಗಳು ಸಮಾಜದಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹೇಮಾವತಿ ಕುಟುಂಬದ ಮುಖದಲ್ಲಿ ಮೂಡಿದ ನಗು, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಸೇವಾ ಮನೋಭಾವಕ್ಕೆ ಜೀವಂತ ಉದಾಹರಣೆಯಾಗಿದೆ.

