ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಸರಿಯಾದ ಯೋಜನೆ ರೂಪಿಸದೆ ಹೆದ್ದಾರಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಜಂಕ್ಷನ್ನಿನ ಫ್ಲೈಓವರ್ ನಿರ್ಮಾಣದಲ್ಲಿ ವಿಳಂಬವಾಗಿದೆ. ಇದರಿಂದ ಜನ ಸಂಕಷ್ಟಕ್ಕೀಡಾಗುತ್ತಿದ್ದರೂ ಸಂಸದರ ಧೋರಣೆ ನೀತಿಯೇ ಕಾರಣ ಎಂದು ಡಿವೈಎಫ್ ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಹೇಳಿದ್ದಾರೆ.
ಅವರು ಉಳ್ಳಾಲ ವಲಯ ಡಿವೈಎಫ್ ಐ ಸಮಿತಿ ವತಿಯಿಂದ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವಿಳಂಬ ನೀತಿಯನ್ನು ಖಂಡಿಸಿ, ಟ್ರಾಫಿಕ್ ಜಾಮ್ ಪರಿಹಾರಕ್ಕೆ ಆಗ್ರಹಿಸಿ, ರಾ.ಹೆ66 ರ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಿಧಾನಗತಿಯಿಂದ ಸಾಗುತ್ತಿರುವ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯಿಂದ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಸರಿಯಾದ ಯೋಜನೆಯನ್ನು ರೂಪಿಸದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ತೊಕ್ಕೊಟ್ಟುವಿನ ಫ್ಲೈಓವರ್ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಸರಿಯಾದ ಸಮಯಕ್ಕೆ ಕಾರ್ಯಕ್ಷೇತ್ರಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಂಜೆ ವೇಳೆ ಯುವತಿಯರು 4 ಗಂಟೆಗೆ ಕಾರ್ಯಕ್ಷೇತ್ರವನ್ನು ಬಿಟ್ಟರೂ ತೊಕ್ಕೊಟ್ಟುವಿನಲ್ಲಿ ಉಂಟಾಗುವ ರಸ್ತೆ ತಡೆಯಿಂದಾಗಿ ಮನೆ ತಲುಪುವಾಗ ರಾತ್ರಿ 8 ಗಂಟೆಯಾಗುತ್ತಿದೆ. ಶಿರಾಡಿ ಘಾಟಿಗೆ ತೆರಳಿ ಕಾಮಗಾರಿ ವೀಕ್ಷಿಸುವ ಸಂಸದ ನಳಿನ್ ಕುಮಾರ್ ಅವರಿಗೆ ತೊಕ್ಕೊಟ್ಟುವಿನಲ್ಲಿ ನಡೆಯುವ ಕಾಮಗಾರಿಯನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ.
ಯಾವ ಲೆಕ್ಕಾಚಾರದಲ್ಲಿ ನಂ.1 ಪಟ್ಟ ದೊರೆತಿದೆ ಅನ್ನುವುದು ನಿಗೂಢವಾಗಿದೆ. ರಾ.ಹೆ ಕಾಮಗಾರಿ ನಡೆಸುವ ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಸಂಸದರು ದೊಡ್ಡ ಮೊತ್ತದ ಕಮೀಷನ್ ಪಡೆದುಕೊಂಡು ಶೀಘ್ರಗತಿಯ ಕಾವiಗಾರಿ ನಡೆಸಲು ಸ್ಪಂಧಿಸುತ್ತಿಲ್ಲ. ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುತ್ತೇವೆ ಎಂದರು.
ಈ ಸಂದರ್ಭ ಉಳ್ಳಾಲ ವಲಯ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಮುಖಂಡರುಗಳಾದ ರಫೀಕ್ ಹರೇಕಳ, ಸುನೀಲ್ ತೇವುಲ, ಭರತ್ ಕುತ್ತಾರ್, ಎಸ್ ಎಫ್ ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಜಯಂತ್ ನಾಯ್ಕ್, ಮಹಾಬಲ.ಟಿ.ದೆಪ್ಪೆಲಿಮಾರ್, ಜನಾರ್ದನ ಕುತ್ತಾರ್, ಇಬ್ರಾಹಿಂ ಅಂಬ್ಲಮೊಗರು, ಹರೀಶ್ ಕಲ್ಲಾಪು, ಹರೇಕಳ ಪಂಚಾಯತ್ ಸದಸ್ಯರಾದ ಅಶ್ರಫ್ , ಹನೀಫ್, ವಲಯ ಸಮಿತಿ ಪದಾಧಿಕಾರಿಯಾದ ರೋಹಿದಾಸ್ ಅಬ್ಬಂಜರ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತರಿಗೆ ಅಡ್ಡಿ
ಕಾಮಗಾರಿ ವಿಳಂಬದ ವಿರುದ್ಧ ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ಫ್ಲೈಓವರ್ ಕಾಮಗಾರಿಯ ಚಿತ್ರೀಕರಣ ನಡೆಸಲು ಹೋದ ಪತ್ರಕರ್ತರಿಗೆ ಗುತ್ತಿಗೆ ಸಿಬ್ಬಂದಿ ಅಡ್ಡಿಪಡಿಸಿ ಛಾಯಗ್ರಹಣ ನಡೆಸದಂತೆ ತಡೆಯೊಡ್ಡಿದ ಪ್ರಸಂಗವೂ ನಡೆಯಿತು. ಕಾಮಗಾರಿಯ ಚಿತ್ರೀಕರಣ ನಡೆಸುವಂತಿಲ್ಲ, ಅನುಮತಿಯಿದ್ದಲ್ಲಿ ಮಾತ್ರ ತೆಗೆಯಬೇಕು ಎಂಬ ಕಾನೂನು ಇದೆ ಎಂದು ಹೇಳಿದಾಗ ಪ್ರತಿಕ್ರಿಯಿಸಿದ ಸಿಬ್ಬಂದಿ ಅಂತಹ ಕಾನೂನು ಇದ್ದಲ್ಲಿ ಅದರ ಪ್ರತಿಯನ್ನು ತೋರಿಸಿ ತೆಗೆಯುವುದನ್ನು ನಿಲ್ಲಿಸುತ್ತೇವೆ ಎಂದು ಪತ್ರಕರ್ತರು ಸವಾಲೊಡ್ಡಿದಾಗ ಸಿಬ್ಬಂದಿ ಸುಮ್ಮನಾದರು.


