ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದೇರಳಕಟ್ಟೆಯ ಮೇಲ್ತೆನೆ ಸಂಘಟನೆಯ ಸಹಯೋಗದೊಂದಿಗೆ ಮೇ.5ರಂದು ಉಳ್ಳಾಲ ತಾಲೂಕು 3ನೇ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ, ಹಾಡುಗಾರ ಬಶೀರ್ ಅಹ್ಮದ್ ಕಿನ್ಯಾ ಆಯ್ಕೆಯಾಗಿದ್ದಾರೆ.

ಸುಮಾರು 28ವರ್ಷಗಳಿಂದ ಬ್ಯಾರಿ ಗಾಯಕರಾಗಿರುವ ಬಶೀರ್ ಅಹ್ಮದ್ ಕಿನ್ಯಾ ಬಹುಭಾಷಾ ಕವಿಯಾಗಿ, ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಬಶೀರ್ ಕಿನ್ಯರೊ ಪಾಟ್, ಕೊತ್ತಿಪ್ಪು ನಲ್ಮಾಲೆ ಮತ್ತು ಮೀಲಾದ್ ಪಾಟ್ ಇವು ಬಶೀರ್ ಅಹ್ಮದ್ ಕಿನ್ಯಾರ ಪ್ರಕಟಿತ ಬ್ಯಾರಿ ಕೃತಿಗಲಾಗಿವೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಹೊರ ತಂದಿರುವ ನೂರು ಕಿವಿಮಾರೊ ಕಾವ್ಯ ಸಂಕಲನ ಕೃತಿಗೆ ಇವರು ಸಂಪಾದಕರಾಗಿದ್ದರು.
ಇವರ ಮೊದಲ ಬ್ಯಾರಿ ಹಾಡುಗಳ ಧ್ವನಿಸುರುಳಿ `ಮಸ್ಕತ್ತ್ಗೊರು ಕಲ್ಲಾಸ್ ಕೇವಲ ನಾಲ್ಕೆöÊದು ದಿನಗಳಲ್ಲಿ ಮಾರಾಟಗೊಂಡು ದಾಖಲೆ ನಿರ್ಮಿಸಿತ್ತು. ಆ ಬಳಿಕ ಅಲಿಕಾತ್, ಉರುಮಾಲ್, ಬಂಗಾರ್, ಮಹರ್, ಮರ್ಹಬ, ಸುಲ್ತಾನ ಮುಂತಾದ ಧ್ವನಿಸುರುಳಿಗಳೂ ಭಾರೀ ಮಟ್ಟದಲ್ಲಿ ಮಾರಾಟಗೊಂಡು ಸುದ್ದಿ ಮಾಡಿದ್ದವು.
2002ರಲ್ಲಿ ಹೊರಬಂದ ಇವರ ಬ್ಯಾರಿ ಬೈಲಾ ಧ್ವನಿಸುರುಳಿಯು ಸುಮಾರು 22,000 ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿದೆ. ಬ್ಯಾರಿ ಮಸಾಲೆ ಮತ್ತು ಚೆಡಿಲ್ ಇವರು ಸಾಹಿತ್ಯ ರಚಿಸಿ, ಹಾಡಿರುವ ಇತರ ಧ್ವನಿ ಸುರುಳಿಗಳು. ಬ್ಯಾರಿ ಮತ್ತು ಕನ್ನಡದಲ್ಲಿ ದಫ್ ಹಾಡುಗಳನ್ನು ರಚಿಸಿರುವ ಬಶೀರ್ ಅಹ್ಮದ್ ಕಿನ್ಯಾ ಸುಮಾರು 150ಕ್ಕಿಂತಲೂ ಹೆಚ್ಚು ಬ್ಯಾರಿ, ಕನ್ನಡ, ಮಲಯಾಳಂ ಧ್ವನಿಸುರುಳಿಗಳಿಗೆ ಸಾಹಿತ್ಯ ರಚಿಸಿ ಹಾಡಿದ್ದಾರೆ. ರಾಜ್ಯ ಹೊರ ರಾಜ್ಯ ಮತ್ತು ವಿದೇಶಗಳಲ್ಲೂ ಬ್ಯಾರಿ ಕವಿಗೋಷ್ಠಿ ಮತ್ತು ಬಹುಭಾಷಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದ ಬಶೀರ್ ಅಹ್ಮದ್ ಕಿನ್ಯಾ ಅವರಿಗೆ ಅಕಾಡೆಮಿಯು ಗೌರವ ಪ್ರಶಸ್ತಿ ನೀಡಿದೆ. 2013ರಲ್ಲಿ ದುಬೈನಲ್ಲಿ ನಡೆದ ದ.ಕ. ಸುನ್ನಿ ಸೆಂಟರ್‌ನ ಮೀಲಾದ್ ಮೀಟ್ ಕಾರ್ಯಕ್ರಮದಲ್ಲಿ ಇವರನ್ನು ಬ್ಯಾರಿ ಕವಿಯೆಂಬ ನೆಲೆಯಲ್ಲಿ ಅಭಿನಂದಿಸಲಾಗಿದೆ. ಮಂಗಳೂರಿನ ಬ್ಯಾರಿ ಕಲಾರಂಗವು 2013ರಲ್ಲಿ ಬ್ಯಾರಿ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2015ರಲ್ಲಿ ಅಬುಧಾಬಿಯ ಬ್ಯಾರೀಸ್ ವೆಲ್ಫೆರ್ ಫೋರಂ ಮತ್ತು ಬ್ಯಾರಿ ಗೈಸ್ ಮತ್ತಿತರ ಸಂಘಟನೆಗಳು ಇವರನ್ನು ಅಭಿನಂದಿಸಿದೆ. ಬ್ಯಾರಿ ಬರಹಗಾರರು ಮತ್ತು ಕಲಾವಿದರ ಒಕ್ಕೂಟ, ಮೇಲ್ತೆನೆ ಸಂಘಟನೆಯ ಸ್ಥಾಪಕರಲ್ಲಿ ಒಬ್ಬರಾಗಿರುವ ಇವರು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಿನ್ಯಾ ಅನ್ಸಾರುಲ್ ಮಸಾಕೀನ್ ಸಂಘಟನೆಯ ಕಾರ್ಯದರ್ಶಿಯಾಗಿ, ಅಖಿಲ ಭಾರತ ಬ್ಯಾರಿ ಪರಿಷತ್ ಮತ್ತು ಬ್ಯಾರಿ ಕಲಾರಂಗದಲ್ಲಿ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

