ಕಾಸರಗೋಡು, ಏ. 06 ;ಹತ್ತು ವರ್ಷಗಳ ಎಲ್ ಡಿ ಎಫ್ ಆಡಳಿತ ಕೇರಳವನ್ನು ದಿವಾಳಿಯತ್ತ ಕೊಂಡೊಯ್ದಿದ್ದು ನಿರುದ್ಯೋಗ, ಬೆಲೆ ಏರಿಕೆ , ಹಣದುಬ್ಬರದಿಂದ ಕೇರಳ ತತ್ತರಿಸುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಅವರು ಮಂಜೇಶ್ವರ ಸಮೀಪದ ವರ್ಕಾಡಿ ಮಜೀರ್‌ಪಳ್ಳದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್‌ರವರ ಪರ ಚುನಾವಣಾ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕೇರಳದಲ್ಲಿ ಈ ಹಿಂದಿನ ಕಾಂಗ್ರೆಸ್ ಸರಕಾರ ಹಾಗೂ ಈಗ ಆಡಳಿತ ನಡೆಸಿದ ಎಲ್ ಡಿ ಎಫ್ ಸರಕಾರ ತುಲನೆ ಮಾಡಿ ಕೇರಳದಲ್ಲಿ ನಿರುದ್ಯೋಗ ಹಾಗೂ ಹಣದುಬ್ಬರ, ಹಾಗೂ ಸಾಲದ ಸುಳಿಯಲ್ಲಿ ಸರ್ಕಾರ ಸಿಲುಕಿಕೊಂಡಿದೆ ಎಂದು ಅಂಕಿ ಅಂಶ ಮುಂದಿಟ್ಟು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ಕೇರಳದಲ್ಲಿ ಬಿಜೆಪಿಗೆ ಸ್ಥಾನವಿಲ್ಲ. ಏಕೆಂದರೆ ಬಿಜೆಪಿಯವರು ರೈತರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ ವಿರೋಧಿಗಳು. ಬಿಜೆಪಿಯವರಿಗೆ ಯಾವುದೇ ಸಿದ್ಧಾಂತವಿಲ್ಲ. ಶ್ರೀಮಂತರು, ಮೇಲ್ವರ್ಗದವರು, ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಬಿಜೆಪಿಯಿದೆ. ಕರ್ನಾಟಕದಲ್ಲಿ 2023 ರ ಚುನಾವಣೆಯ ಮೊದಲು ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಆದರೆ ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಮಾಡಿದರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಟೀಕಿಸಿದ್ದರು ಎಂದು ಹೇಳಿದರು.ಗ್ಯಾರಂಟಿಗಳಿಂದ ಸರ್ಕಾರ ಖಜಾನೆ ಖಾಲಿಯಾಗುತ್ತದೆಂಬ ಬಿಜೆಪಿಯವರ ನಿರಂತರ ಟೀಕೆಗಳು ಬಂದವು. ಆದರೆ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಿಂದ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ. ಇದುವರೆಗೆ 1.31 ಲಕ್ಷ ಕೋಟಿಗಳನ್ನು ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದೆ. 2023 ರ ಮೇ ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಶಕ್ತಿ ಯೋಜನೆ ಜಾರಿಮಾಡಲಾಯಿತು.ಕರ್ನಾಟಕದಲ್ಲಿ 3.5 ಕೋಟಿ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುವ ಯೋಜನೆಯಾಗಿದೆ. ಕೇರಳದಲ್ಲಿಯೂ ಇಂದಿರಾ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಉಚಿತ ಪ್ರಯಾಣ ಮಾಡುವ ಈ ಯೋಜನೆಯಿಂದ ಜನರಿಗೆ ಹಣ ಉಳಿತಾಯವಾಗಲಿದೆ ಎಂದರು. ಆರ್ಥಿಕತೆಯಲ್ಲಿ ಯೂನಿವರ್ಸಲ್ ಬೇಸಿಕ್ ಇನಕ್ಂ ತತ್ವದಂತೆ ತಳಸಮುದಾಯದವರಿಗೆ ಆರ್ಥಿಕ ನೆರವು ನೀಡಿದರೆ, ಆ ಹಣ ವ್ಯರ್ಥವಾಗುವುದಿಲ್ಲ.ಶಕ್ತಿ ಯೋಜನೆಯಿಂದ ಉಳಿತಾಯವಾಗುವ ಹಣದಿಂದ ಮಹಿಳೆಯರ ಖರೀದಿ ಮಾಡುವ ಶಕ್ತಿ ಹೆಚ್ಚಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ 1ಕೋಟಿ .26 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2000 ರೂ.ಗಳನ್ನೂ ಒದಗಿಸಲಾಗುತ್ತಿದೆ. ಬಿಜೆಪಿಗೆ ಇಂಥ ಜನಪರ ಯೋಜನೆಗಳನ್ನು ರೂಪಿಸಿ ಗೊತ್ತಿಲ್ಲ ಬಿಜೆಪಿಗೆ ಇಂಥ ಜನಪರ ಯೋಜನೆಗಳನ್ನು ರೂಪಿಸಿ ಗೊತ್ತಿಲ್ಲ. ಆದರೆ ಮಹಾರಾಷ್ಟ್ರ ರಾಜ್ಯದಲ್ಲಿ ಈ ಯೋಜನೆಗಳನ್ನು ನಕಲು ಮಾಡಿದ್ದಾರೆ.ಕೇರಳ ರಾಜ್ಯ ಕೂಡ ನುಡಿದಂತೆ ನಡೆಯಲಿದೆ ಎಂಬ ನಂಬಿಕೆ ವಿಶ್ವಾಸವಿದ್ದರೆ ಯುಡಿಎಫ್ ಅಭ್ಯರ್ಥಿ ಅಶ್ರಫ್ ಅವರಿಗೆ ಮತ ಹಾಕಬೇಕು ಎಂದರು. ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಬಡವರು ಯಾರೂ ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಕಾಂಗ್ರೆಸ್ ಬಡವರ ಪರವಾಗಿರುವ ಪಕ್ಷವಾಗಿದ್ದು ಯುಡಿಎಫ್ ಕೂಡ ಬಡವರ ಪರವಾಗಿರುವ ಮಿತ್ರ ಪಕ್ಷ ಎಂದರು.ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾ ನ್ , ಕೆಪಿಸಿಸಿ ಕಾರ್ಯದರ್ಶಿ ಬಾಲಕೃಷ್ಣ ಪೆರಿಯ , ಸುಧೀರ್ ಕುಮಾರ್ ಮರೋಳಿ , ಅಭ್ಯರ್ಥಿ ಎ .ಕೆ ಎಂ ಅಶ್ರಫ್ ಮಾತನಾಡಿದರು. ಕರ್ನಾಟಕ ಸಚಿವ ಸಣ್ಣ ನೀರಾವರಿ ಬೋಸ ರಾಜ್, ಸುಬ್ಬಯ್ಯ ರೈ, ಶಾಸಕ ಅಶೋಕ್ ಕುಮಾರ್ ರೈ, ವಿನಯಕುಮಾರ್ ಸೊರಕೆ, ರಮನಾಥ ರೈ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಗಲ್, ಹಕೀಂ ಕುನ್ನಿಲ್, ಹರ್ಷಾದ್ ವರ್ಕಾಡಿ, ಸೋಮಶೇಖರ ಜೆ. ಎಸ್, ಸುರೇಶ್ ಶೆಟ್ಟಿ,ಮಂಜುನಾಥ ಆಳ್ವ, ಅಜೀಜ್ ಮರಿಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ ಫೈಝಲ್ಉ ಪಸ್ಥಿತರಿದ್ದರು.


