ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಹದಿಮೂರನೇ ವರ್ಷದ ಅಂಗವಾಗಿ ವಿವಿಧ ಕಡೆಗಳಲ್ಲಿ ಒಟ್ಟು ಹದಿಮೂರು ರಕ್ತದಾನ ಶಿಬಿರಗಳನ್ನು ನಡೆಸುತ್ತಿದ್ದು ರಕ್ತದ ಕೊರತೆಯನ್ನು ನೀಗಿಸಲು ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಸಂಸ್ಥೆಯ ತಂಡದಿಂದ ಕೈಗೊಳ್ಳಲಾಗಿದ್ದು, ಕಳೆದ ರಂಝಾನ್ ತಿಂಗಳಲ್ಲಿ ಹಗಲಿನಲ್ಲಿ ರಕ್ತದಾನ ಶಿಬಿರಗಳು ನಡೆಯದ ಪರಿಸ್ಥಿತಿಯಲ್ಲಿಯೂ, ನಮ್ಮ ತಂಡ ರಾತ್ರಿ ಸಮಯದಲ್ಲಿ ರಕ್ತದಾನಿಗಳನ್ನು ನೇರವಾಗಿ ಬ್ಲಡ್ ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ರಕ್ತದಾನ ಮಾಡಿಸುವ ಮೂಲಕ ಮಾನವೀಯ ಸೇವೆಯನ್ನು ಮುಂದುವರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ನವಾಝ್ ನರಿಂಗಾನ ಹೇಳಿದರು.

ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸ್ಥೆಯ ವತಿಯಿಂದ ಇದುವರೆಗೆ 550ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿ 120000ಯೂನಿಟ್ ರಕ್ತ ಸಂಗ್ರಹಣೆ ಮಾಡಿದ್ದೇವೆ. ಆ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಲು ಸಹಕರಿಸಿದ ಎಲ್ಲ ಸಂಘಟನೆಗಳು ಮತ್ತು ಸಂಯೋಜಕರನ್ನು ಗುರುತಿಸಿ ಸನ್ಮಾನಿಸುವುದು ಹಾಗೂ 50ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಗೌರವಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಅದಾಗಲೇ ಕೊಕ್ಕಡ, ಮಾಡವು, ಚಾರ್ಮಾಡಿಯಲ್ಲಿ ಶಿಬಿರ ನಡೆಸಲಾಗಿದ್ದು ಎ. 05ರಂದು ಮದನಿ ನಗರ, ಬೋಳೂರು, ಅಂಗರಗುಂಡಿ ಹಾಗೂ ಕಳಸದಲ್ಲಿ , ಎ. 07ರಂದು ವಿಟ್ಲ, ಎ. 08ರಂದು -ಮಾಚಾರ್, ಎ. 10ರಂದು ದುಬೈ, ಎ. 12ರಂದು ಕುಶಾಲನಗರ ಹಾಗೂ ಹೊನ್ನಾವರದಲ್ಲಿ ನಡೆಯಲಿದೆ.
ಜೂ. 13ರಂದು ನಗರದ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಐವತ್ತಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ವ್ಯಕ್ತಿಗಳನ್ನು ಗುರುತಿಸಿ “ರಕ್ತ ಯೋಧ ಪ್ರಶಸ್ತಿ” ನೀಡಲು ತೀರ್ಮಾನಿಸಲಾಗಿದೆ. ಅಂತಹ ವ್ಯಕ್ತಿಗಳನ್ನು ಗುರುತಿಸಲು ಈಗಾಗಲೇ ಎಲ್ಲ ಬ್ಲಡ್ ಬ್ಯಾಂಕ್‌ಗಳು ಹಾಗೂ ಸಂಬಂಧಪಟ್ಟ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅಶ್ರಫ್ ಸಿ.ಎಂ. ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್ ಕಾಶಿಪಟ್ನ, ಶಿಬಿರ ಆಯೋಜಕ ಫರ್ಝಾನ್ ಅಹ್ಮದ್ ಹಾಗೂ ಕಾರ್ಯದರ್ಶಿ ನಿಸಾರ್ ಉಳ್ಳಾಲ ಹಾಗೂ ಸಂಘಟನಾ ಕಾರ್ಯದರ್ಶಿ ಅಬ್ದುಸ್ಸಲಾಂ ಚೆಂಬುಗುಡ್ಡೆ ಉಪಸ್ಥಿತರಿದ್ದರು.


