ಮಂಗಳೂರು, ಮಾ.24: ಪ್ರವಾಸಿ ವಾಹನಗಳಲ್ಲಿ ಕಡ್ಡಾಯಗೊಳಿಸಿರುವ ಪ್ಯಾನಿಕ್ ಬಟನ್ ಅಳವಡಿಕೆ ಕುರಿತು ರಾಜ್ಯದ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕ-ಮಾಲಕರಿಂದ ಆರೋಪಗಳು ಕೇಳಿಬಂದಿವೆ. ಸರ್ಕಾರದ ಆದೇಶದಿಂದ ತಮ್ಮ ಮೇಲೆ ಅನ್ಯಾಯವಾಗಿದ್ದು, ಇದು ಉದ್ಯೋಗಕ್ಕೆ ಹೊಡೆತ ನೀಡಿದಂತಾಗಿದೆ ಎಂದು ದ.ಕ. ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಆನಂದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ರಾಜ್ಯ ಸರ್ಕಾರ ತುರ್ತಾಗಿ ಪ್ಯಾನಿಕ್ ಬಟನ್ ಅಳವಡಿಕೆಯನ್ನು ಕಡ್ಡಾಯಗೊಳಿಸಿತ್ತು. ಈಗಾಗಲೇ ಹಲವು ನಿಯಮಗಳನ್ನು ಪಾಲಿಸಿಕೊಂಡು ಬಂದಿರುವ ಚಾಲಕರಿಗೆ ಈ ಹೊಸ ನಿಯಮ ಹೆಚ್ಚುವರಿ ಆರ್ಥಿಕ ಹೊರೆ ತಂದಿದೆ ಎಂದರು.
ಚಾಲಕರ ಮಾಹಿತಿಯಂತೆ ಪ್ಯಾನಿಕ್ ಬಟನ್ ಸಾಧನದ ಮೂಲ ಬೆಲೆ ರೂ.3000ದಿಂದ 4000ರೊಳಗೆ ಇದ್ದು, ಪಕ್ಕದ ಕೇರಳ ರಾಜ್ಯದಲ್ಲಿ ಇದೇ ದರಕ್ಕೆ ಲಭ್ಯವಿದೆ. ಆದರೆ ರಾಜ್ಯದ ಸಾರಿಗೆ ಇಲಾಖೆ ಉಚ್ಚ ನ್ಯಾಯಾಲಯಕ್ಕೆ 8250ರವರೆಗೆ ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದು, ಈ ಯೋಜನೆಗಾಗಿ 12 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಈ ಕಂಪನಿಗಳು ಸಾಧನವನ್ನು 13,500ರಿಂದ 16,000ರವರೆಗೆ ಮಾರಾಟ ಮಾಡುತ್ತಿದ್ದು, ಯಾವುದೇ ಬಿಲ್ ನೀಡಲು ನಿರಾಕರಿಸುತ್ತಿವೆ ಎಂದು ಚಾಲಕರು ಆರೋಪಿಸಿದ್ದಾರೆ.
ಫಟ್ನೆಸ್ ಸರ್ಟಿಫಿಕೇಟ್ ಪಡೆಯಲು ಅನಿವಾರ್ಯವಾಗಿರುವುದರಿಂದ ಚಾಲಕರು ಸಾಲಮಾಡಿ ಸಾಧನ ಅಳವಡಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಈ ಪ್ಯಾನಿಕ್ ಬಟನ್ ಕಾರ್ಯಕ್ಷಮತೆಯ ಮೇಲೆಯೂ ಪ್ರಶ್ನೆಗಳು ಎದ್ದಿವೆ. ಅಪಾಯದ ಸಂದರ್ಭದಲ್ಲಿ ಬಟನ್ ಒತ್ತಿದರೂ, ಸಂದೇಶ ಕಂಟ್ರೋಲ್ ರೂಮ್‌ಗೆ ತಲುಪುತ್ತಿಲ್ಲ. ಸಂಬAಧಿತ ಕಂಟ್ರೋಲ್ ರೂಮ್ ವ್ಯವಸ್ಥೆಯೇ ಇಲ್ಲ ಎಂಬ ಆರೋಪ ಕೇಳಿಬಂದಿದೆ. ತುರ್ತು ಪ್ರತಿಕ್ರಿಯೆಗಾಗಿ ಕರೆ ಬರುತ್ತಿಲ್ಲವೆಂಬುದರಿAದ ಈ ಸಾಧನ “ಡಮ್ಮಿ” ಆಗಿದೆ ಎಂದು ಚಾಲಕರು ದೂರಿದ್ದಾರೆ.
ಇದರ ಜೊತೆಗೆ ಸಾಧನದ ವಾರ್ಷಿಕ ರೀಚಾರ್ಜ್ ಶುಲ್ಕಕ್ಕೂ ಭಾರಿ ವ್ಯತ್ಯಾಸವಿದೆ. ಸಾರಿಗೆ ಇಲಾಖೆ 1800 ಎಂದು ತಿಳಿಸಿದ್ದರೂ, ಕಂಪನಿಗಳು 3800ರವರೆಗೆ ವಸೂಲಿ ಮಾಡುತ್ತಿವೆ. ರೀಚಾರ್ಜ್ ಮಾಡದ ವಾಹನಗಳಿಗೆ ಎಫ್‌ಸಿ ನವೀಕರಣವನ್ನು ಆರ್‌ಟಿಸಿ ಅಧಿಕಾರಿಗಳು ತಡೆಹಿಡಿಯುತ್ತಿದ್ದಾರೆ ಎಂಬ ಆರೋಪವೂ ಇದೆ. ಈ ಹಿನ್ನಲೆಯಲ್ಲಿ ಸರ್ಕಾರ ಘೋಷಿಸಿದಂತೆ 1800 ರೀಚಾರ್ಜ್ ಶುಲ್ಕವನ್ನು ಮಾತ್ರ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಎಲ್ಲಾ ಟ್ಯಾಕ್ಸಿ ಚಾಲಕ-ಮಾಲಕರ ಪರವಾಗಿ ಸರ್ಕಾರ ಮತ್ತು ಸಾರಿಗೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಹರೀಶ್, ರಾಜೇಶ್, ಸುರೇಶ್ ಸಾಲಿಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಉಪಸ್ಥಿತರಿದ್ದರು.

