ಮಂಗಳೂರು: ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಾರ್ಚ್ 26ರಂದು ಬೆಳಿಗ್ಗೆ 10.00 ಗಂಟೆಗೆ ಬಿಜೈ (ಮೆಸ್ಕಾಂ ಕಛೇರಿ ಬಳಿ) ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯ್ಕೋಡ್ ಉದ್ಘಾಟಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಉಸ್ಮಾನ್ ಎ. ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಕುಂತಳ ಉಪಸ್ಥಿತರಿರುವರು.
ಪೂರ್ವಾಹ್ನ 11.00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಮಮತಾ ಗಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮ ಫಾರೂಕಿ ಸನ್ಮಾನಿಸುವರು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181ರ ಅಸಿಸ್ಟೆಂಟ್ ಗವರ್ನರ್‌ಗಳಾದ ಪ್ರೊ. ಡಾ| ಚಿನ್ನಗಿರಿ ಗೌಡ ಹಾಗೂ ರಜನಿ ಭಟ್, ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಶ್ರೀಮತಿ ಚಂದ್ರಿಕಾ ಎಸ್. ನಾಯಕ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮೊಬೆನ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸನ್ಮಾನಿತರಾಗಿ ಆರೋಗ್ಯ ಕ್ಷೇತ್ರದಲ್ಲಿ ಜ್ಯೋತಿ ಕೆ. ಉಳೆಪ್ಪಾಡಿ, ಯೋಗದಲ್ಲಿ ದೇವಿಕಾ ಪುರುಷೋತ್ತಮ್, ಶಿಕ್ಷಣದಲ್ಲಿ ಪೂರ್ಣಿಮಾ ರೈ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಪ್ರಮೀಳಾ ರಾವ್, ಮಾಧ್ಯಮದಲ್ಲಿ ಸತ್ಯಾವತಿ, ಮಹಿಳಾ ಸಂಘಟನೆಯಲ್ಲಿ ಜಯಶ್ರೀ ರಟ್ಟಿಹಳ್ಳಿ, ಸಂಗೀತ/ಕಲೆಯಲ್ಲಿ ವಿಭಾ ಎಸ್. ನಾಯಕ್, ಔಷಧೀಯ ಸಸ್ಯ ಸಂರಕ್ಷಣೆಯಲ್ಲಿ ಡಾ| ರಶ್ಮಿ ಕೆ., ಮಹಿಳಾ ಮತ್ತು ಮಕ್ಕಳ ಸೇವೆಯಲ್ಲಿ ಸುಜಾತ, ಪರಿಸರ-ಸಮಾಜ ಸೇವೆಯಲ್ಲಿ ಶ್ರದ್ಧಾ ಕೇಶವ ರಾಮಕುಂಜ, ವಿಶೇಷ ಚೇತನ ಪ್ರತಿಭೆಯಲ್ಲಿ ಪೊಟ್ಟಮ್ಮ, ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಈಜುಪಟು ಶ್ರೀಲಕ್ಷ್ಮಿ ಗಾಣಿಗ ಹಾಗೂ ಯುತ್ ರೆಡ್ ಕ್ರಾಸ್ ಕ್ಷೇತ್ರದಲ್ಲಿ ದೀಕ್ಷಿತಾ ಟಿ.ಎಸ್. ಅವರನ್ನು ಗೌರವಿಸಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರತಿನಿಧಿಗಳು ಆಗಮಿಸಿ ಪ್ರಕಟಣೆ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಈ ಕುರಿತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ. ಹಾಗೂ ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್‌ನ ಅಧ್ಯಕ್ಷರು-ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದ ಸಂಯೋಜಕರಾಗಿ ರೋ. ಗೀತಾ ಬಿ. ರೈ, ರೋ. ಪ್ರಮೀಳಾ ಹೆಗ್ಡೆ, ರೋ. ಸಂತೋಷ್ ಶೇಟ್ ಹಾಗೂ ರೋ. ಜಾಕ್ಸನ್ ಸಲ್ದಾನ ಕಾರ್ಯನಿರ್ವಹಿಸುತ್ತಿದ್ದಾರೆ.

