ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ತ್ಯಾಗ ಬಲಿದಾನದ ಸಂಕೇತವಾಗಿ ಪ್ರತಿಯೊಬ್ಬ ಮುಸಲ್ಮಾನನು ಪ್ರಾಣಿಬಲಿಯೊಂದಿಗೆ ಆಚರಿಸುವ ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹಾಗೂ ದರ್ಗಾ ಅಧ್ಯಕ್ಷ ಯು.ಯಸ್.ಹಂಝ್ ಇವರ ಉಪಸ್ಥಿತಿಯಲ್ಲಿ ನಡೆಯಿತು.
ಈ ವೇಳೆ ಹಬ್ಬದ ಶುಭಹಾರೈಸಿದ ಸಚಿವರು ಪವಿತ್ರವಾದ ಹಬ್ಬವನ್ನು ಸಂತೋಷದಿಂದ ಎಲ್ಲರೂ ಆಚರಿಸಿದ್ದಾರೆ. ತ್ಯಾಗ, ಬಲಿದಾನ, ಸಹೋದರತೆ, ಏಕತೆಂiÀi ಸಂದೇಶವನ್ನು ಪಾಲಿಸುವ ಮೂಲಕ ಅಲ್ಲಹುವಿನ ಪ್ರೀತಿಗೆ ಎಲ್ಲರೂ ಪಾತ್ರರಾಗಬೇಕು. ತಮ್ಮ ವ್ಯಕ್ತಿತ್ವದಲ್ಲೂ ಅದನ್ನು ಮೈಗೂಡಿಸಿಕೊಳ್ಳಬೇಕು. ಶಾಂತಿಯುತ ಸಮಾಜ ಬಲಿಷ್ಠ ಭಾರತ ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಹಬ್ಬವನ್ನು ಶಾಂತಿಯಿಂದ ಆಚರಿಸಬೇಕಿದೆ.
ಹಿರಿಯರ ಮತ್ತು ಉಲೇಮಾಗಳ ತ್ಯಾಗಮಯ ಜೀವನದ ಆದರ್ಶಗಳನ್ನು ಪಾಲಿಸಿ ಜೀವನ ನಿರ್ವಹಿಸಬೇಕಿದೆ ಎಂದ ಅವರು ಸದ್ಯ ಸಮಾಜದಲ್ಲಿ ಭ್ರಷ್ಟಾಚಾರ ದೊಡ್ಡ ಸಮಸ್ಯೆಯಲ್ಲ, ಯಾರಲ್ಲೂ ವಿಶ್ವಾಸ ಇಲ್ಲದೇ ಇರುವುದು ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ವಿಶ್ವಾಸವನ್ನು ಬೆಳೆಸುವ ಕಾರ್ಯ ಹಬ್ಬದ ಆಚರಣೆಗಳಿಂದ ಆಗಬೇಕಿದೆ ಎಂದರು.
ಬಕ್ರೀದ್ ಹಬ್ಬದ ಹಿನ್ನೆಲೆ
ನಾಲ್ಕು ಸಾವಿರ ವರ್ಷಗಳ ಹಿಂದಿನ ಸಂಬಂಧವಿರುವ ಹಬ್ಬಕ್ಕೆ ಇಸ್ಲಾಮಿನ ಪ್ರವಾದಿವರ್ಯರಲ್ಲೋರ್ವರಾದ ಇಬ್ರಾಹಿಂ(ಅ.ಸ) ರವರಿಗೆ ಒಂದು ದಿನ ಮಗನನ್ನು ಬಲಿ ಕೊಡುವಂತೆ ಕನಸು ಬೀಳುತ್ತದೆ. ಅಲ್ಲಾಹನ ಆಜ್ಞೆಯಂತೆ ತನ್ನ ಮಗನಾದ ಇಸ್ಮಾಯಿಲ್ ರನ್ನು ಬಲಿ ಅರ್ಪಿಸಲು ಮುಂದಾದಾಗ ಇಬ್ರಾಹಿಂರ ತ್ಯಾಗ ಸನ್ನದ್ಧತೆಯನ್ನು ಪರೀಕ್ಷಿಸಿದ ಸೃಷ್ಟಿಕರ್ತನು ಪುತ್ರನ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆದೇಶಿಸುತ್ತಾನೆ. ಅದರಂತೆ ಕುರಿಯನ್ನು ಬಲಿ ಅರ್ಪಿಸಲಾಗುತ್ತದೆ. ತ್ಯಾಗಸನ್ನದ್ಧತೆಯ ಪರೀಕ್ಷೆಯಲ್ಲಿ ಇಬ್ರಾಹಿಂ(ಅ.ಸ) ಗೆಲುವು ಸಾಧಿಸುತ್ತಾರೆ. ಈ ಘಟನೆಯ ಸ್ಮರಣಾರ್ಥ ಇಂದು ಜಗತ್ತಿನಾದ್ಯಂತ ಮುಸಲ್ಮಾನರು ಆಡು, ಕುರಿ, ಕೋಣಗಳನ್ನು ಬಲಿಕೊಡುವ ಮೂಲಕ ತ್ಯಾಗ ಸನ್ನದ್ಧತೆಯನ್ನು ಪ್ರಕಟಿಸುತ್ತಾರೆ.
ಬಕ್ರೀದ್ ಹಬ್ಬ ಕೇವಲ ಸಂತೋಷಕ್ಕೆ ಮಾತ್ರ ಒತ್ತು ನೀಡದೆ, ಜೀವನ ಪರ್ಯಂತ ಸಂತೋಷದಿಂದ ಮತ್ತು ಸಮಾಜದ ಸಂತೋಷವನ್ನು ಕದಡದೆ ಕೃತಾರ್ಥ ಬದುಕನ್ನು ಸಾಗಿಸಲು ಬೇಕಾದಂತಹ ವ್ಯಕ್ತಿತ್ವ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.















