ಉಳ್ಳಾಲ; ಉಳ್ಳಾಲ ಯುನೈಟೆಡ್ ಉಳ್ಳಾಲ ಸಂಘಟನೆಯ ವತಿಯಿಂದ ಈದುಲ್ ಫಿತ್ರ್ ಹಬ್ಬವನ್ನು ಸೋಮೇಶ್ವರದ ನೆಹರು ನಗರದ ಪಶ್ಚಿಮ್ ರಿಹ್ಯಾಬ್ ಮಾನಸಿಕ ಪುನಶ್ಚೇತನ ಕೇಂದ್ರದ ಆಶ್ರಮವಾಸಿಗಳೊಂದಿಗೆ ಆತ್ಮೀಯವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಮಾನವೀಯತೆಯ ದೃಷ್ಟಿಯಿಂದ ಪಶ್ಚಿಮ್ ರಿಹ್ಯಾಬ್ ಸೆಂಟರ್ ಸಮಾಜಕ್ಕೆ ಮಾದರಿಯಾದ ಸೇವೆಯನ್ನು ಸಲ್ಲಿಸುತ್ತಿದೆ. ಆಶ್ರಮವಾಸಿಗಳೊಂದಿಗೆ ಹಬ್ಬ ಆಚರಿಸುವುದು ಸಮಾಜದಲ್ಲಿ ಸಹಾನುಭೂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುತ್ತದೆ. ಎಲ್ಲರ ಜೀವನದಲ್ಲಿ ಶಾಂತಿ, ಆರೋಗ್ಯ ಮತ್ತು ಒಳಿತು ನೆಲೆಸಲಿ ಎಂದು ಹಾರೈಸಿದರು.

ಯುನೈಟೆಡ್ ಉಳ್ಳಾಲ ಸಂಘಟನೆಯ ಆಯೂಬ್ ಉಳ್ಳಾಲ ಅವರು ಮಾತನಾಡಿ, ಉಳ್ಳಾಲ ಪ್ರದೇಶದಲ್ಲಿ ಐಕ್ಯತೆ, ಸೌಹಾರ್ದತೆ, ಆರೋಗ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿ ಸಾಮರಸ್ಯಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಸ್ಪೀಕರ್ ಯು.ಟಿ.ಖಾದರ್ ಅವರು ಇಂದು ಸಂಘಟನೆಯ ಹೆಸರನ್ನು ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಜ್ಜಾಗಿದೆ ಎಂದು ತಿಳಿಸಿದರು.

ಪಶ್ಚಿಮ್ ರಿಹ್ಯಾಬ್ ಸೆಂಟರ್‌ನ ಸ್ಥಾಪಕರಾದ ರೋಹಿತ್ ಸಾಂಕ್ಟಸ್ ಮಾತನಾಡಿ, ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಆಶ್ರಮವಾಸಿಗಳಿಗೆ ಔತಣ ಕೂಟವನ್ನು ಆಯೋಜಿಸಿರುವುದು ಸಂತಸದ ವಿಷಯ. ಹಬ್ಬಗಳು ಧರ್ಮ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸುವ ಸೇತುವೆಯಾಗಿವೆ. ಪರಸ್ಪರ ಸಹಕಾರ ಮತ್ತು ಪ್ರೀತಿಯಿಂದ ಸಮಾಜವನ್ನು ನಿರ್ಮಿಸಬಹುದು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಯುನೈಟೆಡ್ ಉಳ್ಳಾಲ ಸಂಘಟನೆಯ ಅಧ್ಯಕ್ಷ ಮುಸ್ತಫ ಅಬ್ದುಲ್ಲ ಉಳ್ಳಾಲ, ಕಾರ್ಯದರ್ಶಿ ಆಯೂಬ್ ಮಂಚಿಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸ್ಪೀಕರ್ ಯು.ಟಿ.ಖಾದರ್ ಆಶ್ರಮವಾಸಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಬಳಿಕ ಆಶ್ರಮವಾಸಿಗಳಿಗೆ ಆಹಾರವನ್ನು ವಿತರಿಸಿ, ಹಬ್ಬದ ಶುಭಾಶಯಗಳನ್ನು ತಿಳಿಸಿದ್ರು.

ಹಬ್ಬದ ಸಂಭ್ರಮದ ನಡುವೆ ಆಶ್ರಮದಲ್ಲಿ ಸಂತೋಷದ ವಾತಾವರಣ ನಿರ್ಮಾಣಗೊಂಡಿದ್ದು, ಸಂಘಟನೆಯ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು.

