ಕೊಣಾಜೆ; ಇಂದಿನ ಆಧುನಿಕತೆಯಲ್ಲೊ ಮಹಿಳೆಗೆ ಸಮಾಜದಲ್ಲಿ ಹಲವಾರು ಅವಕಾಶಗಳು ಇವೆಯಾದರೂ ಅವಳೆದುರು ಅನೇಕ ಸವಾಲುಗಳೂ ಇವೆ. ಮಹಿಳೆಯು ಶಿಕ್ಷಣ,ಜ್ಞಾನ, ಕೌಶಲ್ಯ ಮೊದಲಾವುಗಳ ಮೂಲಕ ಸಮಾಜದ ಧ್ವನಿಯಾಗಬೇಕು. ವರ್ತಮಾನ ಕಾಲದ ಬದುಕಿನ ಸಂಗತಿಗಳನ್ನು ಬರವಣಿಗೆಯ ಮೂಲಕ ದಾಖಲಿಸುವ, ವಿಮರ್ಶಿಸುವ ಕಾರ್ಯ ಮಹಿಳೆಯರಿಂದ ಹೆಚ್ಚೆಚ್ಚು ಆಗಬೇಕು. ವೈಚಾರಿಕತೆಯು ನಮ್ಮ ಅಂಧಶ್ರದ್ಧೆಯನ್ನು ದೂರಮಾಡುತ್ತದೆ ಎಂದು ಬರಹಗಾರ್ತಿ, ಕವಿಯತ್ರಿ ಮಮತಾ ಅರಸಿಕೆರೆ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಸೋಮವಾರ ಮಂಗಳ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಶರಣರ ಕಾಲದಲ್ಲಿ ಕೆಳಸಮುದಾಯದ ಮಹಿಳೆಯರಿಗೆ ವಚನಗಳು ಹೇಗೆ ಮಾಧ್ಯಮವಾಗಿತ್ತೋ ಹಾಗೆಯೇ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಸಮಗ್ರ ಬೆಳವಣಿಗೆಗಾಗಿ ಸಾಮಾಜಿಕ ಜಾಲತಾಣವನ್ನು ದುರುಪಯೋಗ ಮಾಡದೆ ವಿವೇಚನಯುಕ್ತವಾಗಿ ಬಳಸಿಕೊಳ್ಳುವ ಚಾಕಚಕ್ಯತೆಯನ್ನು ಮಹಿಳೆ ಬೆಳೆಸಿಕೊಳ್ಳಬೇಕು ಎಂದರು.
ಬೆಂಗಳೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಸಮತಾ ದೇಶ್ಮನೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದಿನದ್ದು ಎಐ ಯುಗ, ಸಾಮಾಜಿಕ ಜಾಲತಾಣ ಸಕ್ರಿಯವಾಗಿದೆ. ತಂತ್ರಜ್ಞಾನದ ಅತಿರೇಕದಿಂದ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಒತ್ತಡಗಳು ಹೆಚ್ಚಾಗುತ್ತಿವೆ. ಆದರೆ ಆಧುನಿಕತೆ, ತಂತ್ರಜ್ಞಾನವನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳೋಣ. ಬರವಣಿಗೆಗೆ ಹೆಚ್ಚು ಪ್ರಾಶಸ್ತ್ಯ ನೀಡೋಣ. ಬರವಣಿಗೆಗಳಿಂದ ನಾವು ವಿಮೋಚನೆಗೊಳ್ಳಬಹುದು, ನಿರಾಳವಾಗಬಹುದು ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸ್ತ್ರೀಯನ್ನು ಗೌರವಿಸುವ ದೇಶ ನಮ್ಮದು. ಮಹಿಳೆಯರಿಗೆ ಇಂದು ಸಮಾಜದಲ್ಲಿ ಅನೇಕ ಅವಕಾಶಗಳೂ ತೆರೆದುಕೊಂಡಿವೆ ಎಂದರು. ಸಮಾರಂಭದಲ್ಲಿ ಮೂವತ್ತೈದು ಸಾವಿರಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ ನಡೆಸಿದ ಉಡುಪಿಯ ವನಜ ಪೂಜಾರ್ತಿ ಹಾಗೂ ಜನಸ್ನೇಹಿ ಅಭಿವೃದ್ಧಿ ಅಧಿಕಾರಿ ವತ್ಸಲಾ ಕುಮಾರಿ ಅವರನ್ನು ಸನ್ಮಾನಿಸಲಾಯಿತು.
ಪ್ರಾಧ್ಯಾಪಕರಾದ ಡಾ.ಮೋನಿಕಾ ಸದಾನಂದ ಉಪಸ್ಥಿತರಿದ್ದರು.
ಡಾ.ಸಬಿತಾ, ರೋಶನಿ ಅವರು ಪ್ರಶಸ್ತಿ ಪತ್ರ ವಾಚಿಸಿದರು. ಮಹಿಳಾ ಅಧ್ಯಯನ ಕೇಂದ್ರದ ಪ್ರೊ.ತ್ರಿವೇಣಿ ಅವರು ಸ್ವಾಗತಿಸಿದರು. ಡೆಪ್ಯೂಟಿ ರಿಜಿಸ್ಟ್ರಾರ್ ಲಲಿತಾ ವಂದಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

