ಉಳ್ಳಾಲ; ಇಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! ಹತ್ತಿಪ್ಪತ್ತು ಜನ ನಾಗರಿಕರು ಸೇರಿ ತಮಗೆ ಇರುವ ಆತಂಕ ತೋಡಿಕೊಂಡರೆ ಈ ಮಟ್ಟಿಗೆ ಪೊಲೀಸ್ ಬಲವನ್ನು ಪ್ರದರ್ಶಿಸಿ ಭಯ ಹುಟ್ಟಿಸುವ ಅಗತ್ಯ ಉಂಟೆ?

ಉಳ್ಳಾಲದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಇದರ ವೆಟ್ ವೆಲ್ ಅತ್ಯಂತ ದಟ್ಟ ಜನವಸತಿಯ ನಡುವೆ ಸಮ್ಮರ್ ಸ್ಯಾಂಡ್ ಬೀಚ್ ಸಮೀಪ ನಿರ್ಮಿಸಲಾಗುತ್ತಿದೆ. ಕೋಟೆಪುರದಲ್ಲಿ ಜನವಸತಿ ನಡುವೆ ಪ್ರಧಾನ ಶುದ್ದೀಕರಣ ಘಟಕವನ್ನು ಸಿಆರ್‌ಝಡ್ ಮತ್ತಿತರ ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿದೆ. ಅದೂ ಸಹ ದಶಕದಷ್ಟು ಹಳೆಯ ಡಿಸೈನ್ ಅಡಿ ಅವೈಜ್ಞಾನಿಕವಾಗಿ, ಕಳಪೆಯಾಗಿ ನಿರ್ಮಾಣಗೊಳ್ಳುತ್ತಿದೆ.
ಕಾರ್ಯಾಚರಣೆ ಆರಂಭಗೊಳ್ಳುವಾಗ ಸುರತ್ಕಲ್‌ನಲ್ಲಿ ನಡೆದಂತೆ ಅನಾಹುತಗಳು ಗ್ಯಾರಂಟಿ. ಸುತ್ತಲ ಜನತೆಗೆ ಈ ಕುರಿತಾಗಿ ದೊಡ್ಡ ಮಟ್ಟದ ಆತಂಕ ಇದೆ. ಆದರೆ, ಇವರ ಧ್ವನಿಯನ್ನು ಬಲವಂತವಾಗಿ ಹತ್ತಿಕ್ಕಲಾಗಿದೆ. ಸಣ್ಣಗೆ ಆಕ್ಷೇಪ ಎತ್ತಿದರೂ ಪೊಲೀಸರು ದಂಡು ದಂಡಾಗಿ ಸ್ಥಳಕ್ಕೆ ಆಗಮಿಸುತ್ತಾರೆ. ಇದಂತು ಅಚ್ಚರಿಯೇ ಸರಿ. ಸಮ್ಮರ್ ಸ್ಯಾಂಡ್ ಬೀಚ್ ಬಳಿ ನಡೆಯುತ್ತಿರುವ ವೆಟ್ ವೆಲ್ ನಿರ್ಮಾಣದ ಕಾಮಗಾರಿ ಸಂದರ್ಭ ಸುತ್ತಲು ನೂರಾರು ಸಂಖ್ಯೆಯಲ್ಲಿರುವ ಮನೆಗಳವರ ಆಕ್ಷೇಪ, ಆತಂಕವನ್ನು ಪೊಲೀಸರನ್ನು ತೋರಿಸಿ ಕಾಲ ಕಸ ಮಾಡಲಾಗಿದೆ.
ನಿನ್ನೆ ವೆಟ್ ವೆಲ್ ಕಾಮಗಾರಿಯ ಸಂದರ್ಭ ಹತ್ತು ಅಡಿಯಲ್ಲೆ ಸಿಹಿ ನೀರು ಸಿಕ್ಕಿದೆ. ಇಷ್ಟು ಮೇಲ್ಗಡೆ ನೀರಿನ ಒರತೆಯ ಸ್ಥಳದಲ್ಲಿ ಅದರ ದುಪ್ಪಟ್ಟು ಆಳದಲ್ಲಿ ವೆಟ್ ವೆಲ್ ನಿರ್ಮಿಸಿದರೆ ನಾಳೆ ಪರಿಸ್ಥಿತಿ ಹೇಗಿದ್ದೀತು? ಊರಿನ ಶೌಚದ ಗುಂಡಿಯ ನೀರೆಲ್ಲ ವೆಟ್ ವೆಲ್ ನಲ್ಲಿ ಓವರ್ ಫ್ಲೋ ಆಗಿ ಮೇಲೆದ್ದರೆ ಸ್ಥಳೀಯರ ಬದುಕು ನರಕ ಆಗುವುದಿಲ್ಲವೆ, ಮಳೆಗಾಲದಲ್ಲಂತೂ ಈ ವೆಟ್ ವೆಲ್ ಕಾರ್ಯಾಚರಣೆ ಪೂರ್ತಿ ನಿಯಂತ್ರಣ ಕಳೆದುಕೊಳ್ಳಲಾರದೆ ? ಸ್ಥಳೀಯ ನೀರಿನ ಮೂಲಗಳು, ತೆರೆದ ಬಾವಿಗಳು ಪೂರ್ತಿ ಮಲಿನಗೊಳ್ಳುವುದಿಲ್ಲವೆ, ಪರಿಸರ ಮಾಲಿನ್ಯ ದೊಡ್ಡ ಮಟ್ಟದಲ್ಲಿ ಉಂಟಾಗುವುದಿಲ್ಲವೆ ? ಎಂಬುದು ಸುಭಾಷ್ ನಗರ, ಸಮ್ಮರ್ ಸ್ಯಾಂಡ್ ಆಸುಪಾಸಿನ ನಿವಾಸಿಗಳ ಆತಂಕವಾಗಿದೆ.
ಕಾಮಗಾರಿ ನಡೆಯುತ್ತಿರುವಾಗ ಹತ್ತು ಅಡಿಯಲ್ಲೆ ನೀರಿನ ಒರತೆ ಚಿಮ್ಮಿದ್ದನ್ನು ಕಂಡು ಒಂದಿಷ್ಟು ಸ್ಥಳೀಯರು ಸ್ಥಳದಲ್ಲಿ ಸೇರಿ ಕಾಮಗಾರಿ ನಿರತರನ್ನು ಈ ಕುರಿತು ಪ್ರಶ್ನಿಸಿದ್ದಾರೆ. ಅಷ್ಟಕ್ಕೆ, ಸೇರಿದ ಜನರಿಗಿಂತಲೂ ದುಪ್ಪಟ್ಟು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲಿಗೆ ಎಲ್ಲವೂ ಗಪ್ ಚುಪ್, ಜನತೆಯ ಬಾಯಿಗೆ ಬಲವಂತದ ಬೀಗ.
ಇದು ಎಷ್ಟು ಸರಿ, ಪೊಲೀಸರಿಗೆ ಈ ರೀತಿಯಲ್ಲಿ ಮಧ್ಯಪ್ರವೇಶಿಸಲು, ಕಾರ್ಯಾಚರಣೆ ನಡೆಸಲು ಅಧಿಕಾರ ಇದೆಯೆ? ಜನತೆಗೆ ತಮ್ಮ ಆತಂಕ ವ್ಯಕ್ತಪಡಿಸುವ ಸ್ವಾತಂತ್ರ‍್ಯವೂ ಉಳ್ಳಾಲದಲ್ಲಿ ಇಲ್ಲವೇ? ಜಿಲ್ಲಾಧಿಕಾರಿಗಳು ಯಾಕೆ ಸ್ಥಳಕ್ಕೆ ಬರಬಾರದು, ಕಾಮಗಾರಿಯ ಸ್ಥಿತಿಗತಿ, ಜನರ ಸಮಸ್ಯೆಗಳನ್ನು ಆಲಿಸಬಾರದು? ಆ ಮೇಲೆ ತಾನೆ ಪೊಲೀಸರ ದಂಡು ಬರಬೇಕಾದದ್ದು? ಉಳ್ಳಾಲ ಏನು ಪ್ರತ್ಯೇಕ ರಿಪಬ್ಲಿಕ್ಕೆ? ಈ ರೀತಿಯ ಸರ್ವಾಧಿಕಾರಿ ನಡೆ, ಏಕಪಕ್ಷೀಯ ತೀರ್ಮಾನಗಳು ಖಂಡನೀಯ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

