ಕೋಝಿಕ್ಕೋಡ್: ಕೆಎಸ್‌ಯು ಪ್ರತಿಭಟನೆ ವೇಳೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಕೇರಳ ವಿದ್ಯಾರ್ಥಿ ಒಕ್ಕೂಟದ(ಕೆಎಸ್‌ಯು) ನಾಯಕ ಬಿಥುಲ್ ಬಾಲನ್ ಅವರ ಮನೆಯ ಮೇಲೆ ಅಪರಿಚಿತ ದುಷ್ಕರ್ಮಿಗಳು ಸ್ಫೋಟಕ ಎಸೆದಿದ್ದಾರೆ.

ವಡಕಾರ ಬಳಿಯ ತಿರುವಳ್ಳೂರಿನಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮುಸುಕುಧಾರಿ ವ್ಯಕ್ತಿಗಳು ಮನೆ ಸಮೀಪ ಬಂದು ಕಾಂಪೌಂಡ್‌ಗೆ ಸ್ಪೋಟಕ ಎಸೆದು ಪರಾರಿಯಾಗಿದ್ದಾರೆ. ಮನೆ ಮುಂದಿನ ಸಿಸಿಟಿವಿ ದೃಶ್ಯಗಳಲ್ಲಿ ಘಟನೆ ಸೆರೆಯಾಗಿದೆ. ಗೇಟ್ ಬಳಿ ನಿಂತಿದ್ದ ಗುಂಪು ಕಟ್ಟಡದ ಕಡೆಗೆ ಸ್ಪೋಟಕ ವಸ್ತುವನ್ನು ಎಸೆಯುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.
ಘಟನೆ ನಡೆದ ಸಮಯದಲ್ಲಿ ಬಿಥುಲ್ ಅವರ ಪೋಷಕರು ಮನೆಯೊಳಗಿದ್ದರು. ಸ್ಫೋಟಕ ಎಸೆತದಿಂದ ಉಂಟಾದ ಸಣ್ಣ ಸ್ಪೋಟದಿಂದ ಕಾಂಕ್ರೀಟ್ ಸನ್‌ಶೇಡ್‌ನ ಒಂದು ಭಾಗಕ್ಕೆ ಹಾನಿಯಾಗಿದ್ದು, ಕಿಟಕಿ ಗಾಜುಗಳು ಒಡೆದಿವೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಬಿಥುಲ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಸ್ಪೋಟಕ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿವರವಾದ ತನಿಖೆ ಆರಂಭಿಸಲಾಗಿದ್ದು, ದಾಳಿಕೋರರನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ತಂಡವು ಸಚಿವರ ಹೇಳಿಕೆಯನ್ನು ದಾಖಲಿಸಲು ಇಂದು ಮತ್ತೆ ಅನುಮತಿ ಕೋರಲಿದೆ. ಸಚಿವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಕಳೆದ ಕೆಲವು ದಿನಗಳಲ್ಲಿ ಅನುಮತಿ ನಿರಾಕರಿಸಲಾಗಿತ್ತು. ಕೆಎಸ್‌ಯು ಪ್ರತಿಭಟನಾ ಸ್ಥಳದ ಕ್ಯಾಮೆರಾ ದೃಶ್ಯಾವಳಿಗಳನ್ನು ಕೋರಿ ತನಿಖಾ ತಂಡವು ಆರ್‌ಪಿಎಫ್‌ಗೆ ಅರ್ಜಿ ಸಲ್ಲಿಸಿದೆ.

