ಉಳ್ಳಾಲ; ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣಗಳಲ್ಲಿ 15 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರು ಮೂಲದ ಆರೋಪಿ ಅಜಯ್ ಪ್ರಸಾದ್ ಜಿ (41) ಕರೆನ್ಸಿ ಟ್ರೆಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ಅಧಿಕ ಲಾಭಂಶ ನೀಡುವುದಾಗಿ ನಂಬಿಸಿ ಸುಮಾರು ರೂ.1ಕೋಟಿ 20 ಲಕ್ಷ ವಂಚನೆ ಮಾಡಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿತ್ತು.

Nano Forex India ಎಂಬ ಸಂಸ್ಥೆಯ forex Robot Software ಮೂಲಕ ಕರೆನ್ಸಿ ಟ್ರೆಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ತಿಂಗಳಿಗೆ 40% ಲಾಭ ಹಾಗೂ 20% ಮರುಪಾವತಿ ನೀಡುವುದಾಗಿ ನಂಬಿಸಿ, ಐಡಿ ಕಾರ್ಡ್ ಮತ್ತು ದಾಖಲೆಗಳನ್ನು ನೀಡಿ ವಿಶ್ವಾಸ ಹುಟ್ಟಿಸಿ, ಪ್ರೊರೆಕ್ಸ್ ರೋಬೋಟ್ ಸಾಫ್ಟ್ವೇರ್ ಬಳಸಲು ಅವಕಾಶ ನೀಡುವುದಾಗಿ ತಿಳಿಸಿ, ವಿವಿಧ ಗ್ರಾಹಕರಿಂದ ಸುಮಾರು 1 ಕೋಟಿ 20 ಲಕ್ಷ ಹಣವನ್ನು ಪಡೆದುಕೊಂಡಿರುತ್ತಾರೆ. ಆದರೆ ಹಣಕ್ಕೆ ಯಾವುದೇ ಲಾಭ ಅಥವಾ ಮರುಪಾವತಿ ನೀಡದೇ, ಹಣವನ್ನು ದುರುಪಯೋಗಪಡಿಸಿ ವಂಚಿಸಿದ್ದಾನೆ.
ಆರೋಪಿಯನ್ನು ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ಮಂಗಳೂರು ನಗರದ 7 ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.




