ಉಳ್ಳಾಲ: ಬಿಜೆಪಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ಸುಜೀತ್ ಮಾಡೂರು ಅವರನ್ನು ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಅವರು ಫೆ.19-ರಂದು ಹೊರಡಿಸಿದ ಆದೇಶದಲ್ಲಿ, ಸುಜೀತ್ ಮಾಡೂರು ಅವರು ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಆದೇಶದ ಪ್ರತಿಯನ್ನು ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಆಳ್ವ ಅವರಿಗೆ ಕಳುಹಿಸಲಾಗಿದೆ.
ಈ ಬೆಳವಣಿಗೆ ಕೋಟೆಕಾರ್ ಪಟ್ಟಣ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಜ.29 ರಂದು ಕೋಟೆಕಾರ್ ಪಟ್ಟಣ ಪಂಚಾಯತಿನಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಸುಜಿತ್ ಮಾಡೂರು ಇವರು 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಿವೇಶನ ರಹಿತರ ಅರ್ಜಿಗಳ ವಿಲೇವಾರಿ ಆಗದೇ ಇರುವ ಕುರಿತು ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಬಡವರ ಪರವಾಗಿ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು.
ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಆಡಳಿತ ಇರುವ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ ಅನ್ನುವ ಆರೋಪ ವ್ಯಕ್ತವಾಗಿತ್ತು.



