ಉಳ್ಳಾಲ: ಸನಾತನ ಹಿಂದೂ ಸೇವಾ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ ಹಾಗೂ ಸನಾತನ ಧರ್ಮಸಭೆ ಉದ್ಘಾಟನಾ ಸಮಾರಂಭ ಹಾಗೂ ಸನಾತನ ಧರ್ಮಸಭೆ ಫೆ.15 ರಂದು ಸಂಜೆ 6 ಕ್ಕೆ ಶ್ರೀ ಕ್ಷೇತ್ರ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ದಿ| ಲೋಕಯ್ಯ ಗಟ್ಟಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಸಮಾನ ಮನಸ್ಕರ ಬಳಗವಾಗಿ ರೂಪುಗೊಂಡಿರುವ ಈ ನೂತನ ಸಂಘಟನೆ ಧರ್ಮ ಜಾಗೃತಿ ಮೂಡಿಸುವುದು, ಸುತ್ತಮುತ್ತಲಿನ ಪ್ರದೇಶದಲ್ಲಿ ಧಾರ್ಮಿಕ ಶ್ರದ್ಧೆ ಪಸರಿಸುವುದು, ಆರ್ಥಿಕ ಮತ್ತು ದೈಹಿಕವಾಗಿ ಅಶಕ್ತರಾಗಿರುವವರಿಗೆ ನೆರವು ನೀಡುವುದು ಉದ್ದೇಶವಾಗಿದೆ ಎಂದು ಸನಾತನ ಹಿಂದೂ ಸೇವಾ ಪ್ರತಿಷ್ಠಾನ ಇದರ ಅಧ್ಯಕ್ಷ ಸುರೇಶ್ ಚೌಟ ಹೇಳಿದರು.

ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಇಂದು ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಯುವಜನಾಂಗದಲ್ಲಿ ಹಿಂದೂ ಧರ್ಮದ ನಿಜಾರ್ಥದ ಪ್ರಜ್ಞೆ ಮೂಡಿಸುವುದು ಸೇರಿದಂತೆ ವಿವಿಧ ಸಾಮಾಜಿಕ ಕಳಕಳಿಯ ಉದ್ದೇಶಗಳನ್ನು ಹೊಂದಿದೆ. ದೂರದ ಪ್ರದೇಶಗಳಿಂದ ಉದ್ಯಮಿಗಳನ್ನೂ, ದಾನಿಗಳನ್ನೂ ಗುರುತಿಸಿ ಅವರ ಮೂಲಕ ಆರ್ಥಿಕ ಸಹಾಯವನ್ನು ಸಂಗ್ರಹಿಸಿ ಸಮಾಜದಲ್ಲಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ ನೆರವಾಗುವ ಉದ್ದೇಶದಿಂದ “ಹಿಂದೂ ಸೇವಾ ಪ್ರತಿಷ್ಠಾನ”ವನ್ನು ಸ್ಥಾಪಿಸಲಾಗುತ್ತಿದೆ. ಇಂದಿನ ಯುವಕರಿಗೆ ಹಿಂದೂ ಸಮಾಜದಲ್ಲಿ ಎದುರಾಗುತ್ತಿರುವ ಸವಾಲುಗಳು, ಸಂಕಷ್ಟಗಳು ಹಾಗೂ ಧಾರ್ಮಿಕ ಜಾಗೃತಿಯ ಅಗತ್ಯತೆ ಕುರಿತು ಅರಿವು ಮೂಡಿಸಿ, ಹಿಂದೂ ಬಾಂಧವರು ಒಗ್ಗಟ್ಟಾಗಿ ನಿಲ್ಲಬೇಕಾದ ಅವಶ್ಯಕತೆಯನ್ನು ತಿಳಿಸುವುದು ಈ ಸಂಘಟನೆಯ ಪ್ರಮುಖ ಧ್ಯೇಯವಾಗಿದೆ. ಅಗತ್ಯವಾದಾಗ ಹಿಂದೂ ಪರ ಹೋರಾಟ ನಡೆಸುವ ಮನೋಭಾವ ಮತ್ತು ಜನಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ರಾಜಾಜಿನಗರ (ಬೆಂಗಳೂರು) ಶಾಸಕರಾದ ಸುರೇಶ್ ಕುಮಾರ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಚೌಟ ಕಕ್ಕೆಮಜಲು ವಹಿಸಲಿದ್ದಾರೆ. ಲಾಂಛನ ಅನಾವರಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹಕರಾದ ಪ್ರಕಾಶ್ ಪಿ.ಎಸ್. ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವೇಕ್ ಶೆಟ್ಟಿ ಬೋಳ್ಯಗುತ್ತು (ಉದ್ಯಮಿ, ಮುಂಬೈ), ಐಕಳ ಹರೀಶ್ ಶೆಟ್ಟಿ (ಜಾಗತಿಕ ಬಂಟರ ಸಂಘದ ಅಧ್ಯಕ್ಷರು), ಕಿಶೋರ್ ಕುಮಾರ್ ಬೊಟ್ಟಿಯಾಡಿ (ವಿಧಾನ ಪರಿಷತ್ ಸದಸ್ಯರು), ನಳಿನ್ ಕುಮಾರ್ ಕಟೀಲು (ಮಾಜಿ ಸಂಸದರು), ಅವಿನಾಶ್ ಕುಮಾರ್ ಕೆ.ಎಸ್., ಲಂಚುಲಾಲ್ ಕೆ.ಎಸ್., ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರ್‌ಗುತ್ತು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಧರ್ಮ ಸೇವಾಳುಗಳಿಗೆ ‘ಸನಾತನಾಭಿವಂದನೆ’ ನೀಡಿ ಗೌರವಿಸಲಿದ್ದು, ಡಾ|| ಎಂ.ಬಿ. ಪುರಾಣಿಕ್, ಪಿ. ಅನಂತಕೃಷ್ಣ ಭಟ್, ಶಕುಂತಲಾ ಶೆಟ್ಟಿ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳು : ಮಧ್ಯಾಹ್ನ 2.00 ಗಂಟೆಯಿಂದ ದೇವಸ್ಥಾನದ ತಂಡದಿಂದ ಶುಭಾರಂಭ, ಮಂಡಲ ಜ್ಯೋತಿ ಪ್ರಜ್ವಲನೆ ಹಾಗೂ ಮಕ್ಕಳಿಂದ ಕುಣಿತ ಭಜನೆ ನಡೆಯಲಿದೆ.ಮಧ್ಯಾಹ್ನ 3.00 ಗಂಟೆಗೆ ವಿವಿಧ ಸಂಘಟನೆಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಜರುಗಲಿವೆ.ಸಂಜೆ 4.00 ಗಂಟೆಗೆ ಸ್ಟಾರ್ ಮೆಲೋಡಿಸ್ ಮಂಗಳೂರು ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.ಇದೇ ವೇಳೆ ಸನಾತನ ಹಿಂದೂ ಸೇವಾ ಪ್ರತಿಷ್ಠಾನದ ಮಹಿಳಾ ಸದಸ್ಯರಿಂದ ‘ವೀರ ರಾಣಿ ಅಬ್ಬಕ್ಕ’ ತುಳು ಕಿರು ನಾಟಕ ಪ್ರದರ್ಶನಗೊಳ್ಳಲಿದೆ.ರಾತ್ರಿ 8.00 ಗಂಟೆಗೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ತಂಡದಿಂದ ‘ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನವಿರಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕರುಗಳಾದ ಪವಿತ್ರ ಕುಮಾರ್ ಗಟ್ಟಿ ಕುತ್ತಾರ್, ಕೆ.ಕೃಷ್ಣ ಶೆಟ್ಟಿ ತಾಮಾರ್ ಪ್ರಧಾನ ಕಾರ್ಯದರ್ಶಿ ದಿನೇಶ್ ಗಟ್ಟಿ ಕುತ್ತಾರ್, ಜೊತೆ ಕಾರ್ಯದರ್ಶಿ ಲತೀಶ್ ರೈ ಅಂಬ್ಲಮೊಗರು, ರಾಮಚಂದ್ರ ಶೆಟ್ಟಿ ಸಂತೋಷನಗರ , ಸುರೇಶ್ ಶೆಟ್ಟಿ ಅಂಬ್ಲಮೊಗರು ಉಪಸ್ಥಿತರಿದ್ದರು.
ಉದಯ ಕುಮಾರ್ ಗಟ್ಟಿ ಹಾಗೂ ಹರಿಣಿ ಉದಯ್ ರಚಿಸಿ ಹಾಡಿದ ಸನಾತನ ಧರ್ಮ ಸಭೆ ಕುರಿತ ಹಾಡಿನ ಆಡಿಯೋ ವನ್ನು ಬಿಡುಗಡೆಗೊಳಿಸಲಾಯಿತು.
ʻರಾಜಕೀಯದವರನ್ನು ಪದಾಧಿಕಾರಿಗಳಾಗಿ ಸ್ವೀಕರಿಸುವುದಿಲ್ಲʼ
ರಾಜಕೀಯ ಹುದ್ದೆಗಳನ್ನು ಹೊಂದಿರುವವರನ್ನು ಪದಾಧಿಕಾರಿಗಳಾಗಿ ಸ್ವೀಕರಿಸುವುದಿಲ್ಲ. ಸಂಘಟನೆಯ ಉದ್ದೇಶ ಸಮಾಜಸೇವೆ ಹಾಗೂ ಧಾರ್ಮಿಕ-ಸಾಮಾಜಿಕ ಜಾಗೃತಿ ಆಗಿದ್ದು, ರಾಜಕೀಯ ವಿಚಾರಗಳಿಗೆ ಯಾವುದೇ ಸಂಬಂಧ ಇರುವುದಿಲ್ಲ.ರಾಜಕೀಯವಾಗಿ ಸಕ್ರಿಯರಾಗಿರುವವರು ಸಂಘಟನೆಯಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸಿದರೆ, ಸಂಘಟನೆಯನ್ನು ಚುನಾವಣಾ ಅಥವಾ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಅಂತಹವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡುವುದಿಲ್ಲ. ಯಾವುದೇ ಪಕ್ಷಕ್ಕೆ ಸೇರಿದ ಸಾಮಾನ್ಯ ಸದಸ್ಯರನ್ನು ಪ್ರತಿಷ್ಠಾನದಲ್ಲಿ ಸ್ವಾಗತಿಸುತ್ತೇವೆ. ಆದರೆ ಅವರು ಯಾವುದೇ ರಾಜಕೀಯ ಹುದ್ದೆಗಳನ್ನು ವಹಿಸಿಕೊಂಡಿರಬಾರದು ಎಂಬುದು ನಿಬಂಧನೆ.
ಪವಿತ್ರ ಕುಮಾರ್ ಗಟ್ಟಿ ಕುತ್ತಾರ್
ಪ್ರಧಾನ ಸಂಚಾಲಕರು



