ಕುಂಬಳೆ :ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಅರಿಕ್ಕಾಡಿ ಟೋಲ್ ಪ್ಲಾಜಾ ವಿವಾದಕ್ಕೆ ಸಂಬಂಧಿಸಿದಂತೆ, ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರಿಂದ ಪಡೆಯಲಾಗುತ್ತಿದ್ದ ಹೆಚ್ಚುವರಿ ಟೋಲ್ ಶುಲ್ಕವನ್ನು ಕೆಎಸ್ಆರ್ಟಿಸಿ ಹಿಂಪಡೆದಿದೆ.
ರಾಷ್ಟ್ರೀಯ ಹೆದ್ದಾರಿಯ ಅರಿಕ್ಕಾಡಿ ಮೂಲಕ ಹಾದುಹೋಗುವ ವಾಹನಗಳಿಂದ ಫಾಸ್ಟ್ಟ್ಯಾಗ್ ಮೂಲಕ ಟೋಲ್ ಕಡಿತಗೊಳಿಸುವ ತನ್ನ ಆದೇಶವನ್ನು ಕೇಂದ್ರ ಸರ್ಕಾರವು ಫೆಬ್ರವರಿ 4 ರಂದು ಹಿಂತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಈ ಆದೇಶದ ಬೆನ್ನಲ್ಲೇ, ಕೆಎಸ್ಆರ್ಟಿಸಿ ಕೂಡ ಪ್ರಯಾಣಿಕರ ಟಿಕೆಟ್ ದರದೊಂದಿಗೆ ಸಂಗ್ರಹಿಸುತ್ತಿದ್ದ ಹೆಚ್ಚುವರಿ ಟೋಲ್ ಮೊತ್ತವನ್ನು ನಿಲ್ಲಿಸಿದೆ.ಈ ವರ್ಷದ ಜನವರಿ 13 ರಿಂದ ಅರಿಕ್ಕಾಡಿ ಮೂಲಕ ಸಂಚರಿಸುವ ವಾಹನಗಳಿಗೆ ಫಾಸ್ಟ್ಟ್ಯಾಗ್ ಮೂಲಕ ಟೋಲ್ ಶುಲ್ಕವನ್ನು ಕಡಿತಗೊಳಿಸಲಾಗುತ್ತಿತ್ತು. ಇದರಿಂದಾಗಿ ಬಸ್ ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಬಿದ್ದಿತ್ತು.ಟೋಲ್ ಶುಲ್ಕ ಹಿಂಪಡೆದಿರುವುದರಿಂದ ಈಗ ಮಂಗಳೂರು-ಕಾಸರಗೋಡು ನಡುವಿನ ಬಸ್ ಪ್ರಯಾಣ ದರವು ಮೊದಲಿನಂತೆಯೇ ಇರಲಿದೆ ಎಂದು ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಕ್ರಮದಿಂದ ಪ್ರತಿದಿನ ಕೆಲಸ ಮತ್ತು ಶಿಕ್ಷಣಕ್ಕಾಗಿ ಅಂತಾರಾಜ್ಯ ಪ್ರಯಾಣ ಮಾಡುವ ಸಾವಿರಾರು ಪ್ರಯಾಣಿಕರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ.



