ಉಳ್ಳಾಲ: ರಾಯಲ್ ಫೌಂಡೇಶನ್ (ರಿ.) ಮುಕ್ಕಚ್ಚೇರಿ, ಉಳ್ಳಾಲವು ತಮ್ಮ ನೂತನ ಕಚೇರಿ ಉದ್ಘಾಟನೆಯ ಉಪಲಕ್ಷ್ಯವಾಗಿ ಒಲವಿನಹಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಮ್ಮವರ ಜೊತೆ ಒಂದು ದಿನ ಎಂಬ ವಿಶೇಷ ಸಾಮಾಜಿಕ ಸೇವಾ ಮತ್ತು ಸಹವಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದೆ.

ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ನಿರಾಶ್ರಿತ ವೃದ್ಧರು ಮತ್ತು ವಿಶೇಷಚೇತನರನ್ನು ಒಳಗೊಂಡಿದ್ದು, ಅವರೊಂದಿಗೆ ಸಂತೋಷ ಮತ್ತು ಸಹಬಾಳ್ವೆಯ ದಿನವನ್ನು ಹಂಚಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಒಲವಿನಹಳ್ಳಿ ರಿಹ್ಯಾಬಿಲಿಟೇಶನ್ ಸೆಂಟರ್ ನಿರ್ವಾಹಕಿ ಸಿಸ್ಟರ್ ಐಲಿನ್ ಮತಾಯಿಸ್ ಅವರು ಉದ್ಘಾಟಿಸಿದರು. ಮಸೀದಿ ಇಮಾಮ್ ಕಬೀರ್ ಸಅದಿ ಅವರು ಶಾಂತಿ ಮತ್ತು ಸೌಹಾರ್ದದ ದುವಾ ಆಶೀರ್ವಚನ ಮಾಡಿದರು. ಮುಖ್ಯ ಅತಿಥಿ ಮತ್ತು ಮಾಜಿ ನಗರಸಭಾ ಕೌನ್ಸಿಲರ್ ಶ್ರೀ ಇಬ್ರಾಹಿಂ ಖಲೀಲ್ ಅವರು ಸಮಾಜದ ಪರಿಧಿಗೆ ಬಂದ ಈ ಬಂಧುಗಳೊAದಿಗೆ ಸಮಯ ಕಳೆಯುವ ಫೌಂಡೇಶನ್ನ ಈ ಮಹತ್ವದ ಉಪಕ್ರಮವನ್ನು ಹೊಗಳಿದರು.
ಕಾರ್ಯಕ್ರಮದ ಅಧ್ಯಕ್ಷ ಮತ್ತು ಫೌಂಡೇಶನ್ ಅಧ್ಯಕ್ಷ ಶ್ರೀ ತೌಸೀಫ್ ಅಲಿ ಅವರು ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾಭಾವನೆಯ ಬಗ್ಗೆ ಮಾತನಾಡಿದರು. ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಶ್ರೀ ನವಾಝ್, ಉಪಾಧ್ಯಕ್ಷ ಶ್ರೀ ಮನ್ಸೂರ್ ಮುಕ್ಕಚ್ಚೇರಿ, ಕಾನೂನು ಸಲಹೆಗಾರ ಶ್ರೀ ಜಲಾಲುದ್ದೀನ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಮಂಗಳೂರ ರಿಯಾಜ್ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಸಾಗಿತು.
ಹಿರಿಯ ನಾಗರಿಕರಿಗಾಗಿ ವಿಶೇಷ ಭೋಜನ ಮತ್ತು ಉಪಹಾರದ ವ್ಯವಸ್ಥೆಯಿತ್ತು. ಮನರಂಜನೆಗಾಗಿ ಆಟ-ಸ್ಪರ್ಧೆ, ಗಾಯನ ಮತ್ತು ಕುಣಿತಗಳನ್ನು ಏರ್ಪಡಿಸಲಾಗಿತ್ತು. ಸೆಂಟರ್ನ ಹಿರಿಯ ಸಿಸ್ಟರ್‌ಗಳು ಸಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂತೋಷದ ವಾತಾವರಣ ಸೃಷ್ಟಿಸಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಖ್ಯಾತ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ಪ್ರಕಾಶ್ ಕುಂಪಲ ಅವರು ಭಾಗವಹಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀ ದಿನೇಶ್ ರೈ ಅವರು ಸಂಘಟನೆಯ ಕಾರ್ಯವನ್ನು ಪ್ರಶಂಸಿಸಿದರು. ಸ್ಥಳೀಯ ಶಾಸಕರ ಪ್ರತಿನಿಧಿ ಶ್ರೀ ಮನ್ಸೂರ್ ಮಂಚಿಲ್ ಮತ್ತು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶ್ರೀ ಝಿಯಾದ್ ಮುಕ್ಕಚ್ಚೇರಿ ಅವರು ಗೌರವ ಸಂದರ್ಶನ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ, ಸಿಸ್ಟರ್ ಐಲಿನ್ ಮತಾಯಿಸ್ ಅವರು ರಾಯಲ್ ಫೌಂಡೇಶನ್ನ ಸೇವಾ ಮನೋಭಾವ ಮತ್ತು ಸಂಘಟನಾ ಕೌಶಲಕ್ಕೆ ಧನ್ಯವಾದಗಳನ್ನು ತಿಳಿಸಿದರು. ಫೌಂಡೇಶನ್ನ ಕಾರ್ಯನಿರ್ವಹಣೆ ಮತ್ತು ಸಮರ್ಪಣೆಗೆ ಅಧ್ಯಕ್ಷ ಶ್ರೀ ತೌಸೀಫ್ ಅಲಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮವು ಸಾಮಾಜಿಕ ಬಾಂಧವ್ಯ ಮತ್ತು ಮಾನವೀಯತೆಯ ಮೌಲ್ಯವನ್ನು ಎತ್ತಿ ತೋರಿಸಿ, ಸಮುದಾಯದಲ್ಲಿ ಸೇವಾ ಭಾವನೆಯನ್ನು ಬಲಪಡಿಸಿತು ಎಂಬುದು ಗಮನಾರ್ಹ ಸಂಗತಿಯಾಗಿದೆ.




