ಕೊಲ್ಯ: ಜಗದ್ಗುರು ಶ್ರೀ ಶ್ರೀ ರಮಾನಂದ ಸ್ವಾಮೀಜಿಯವರು ಸ್ಥಾಪಿಸಿದ, “ದಕ್ಷಿಣದ ಕೊಲ್ಲೂರು” ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಕ್ಷೇತ್ರ ಕೊಲ್ಯ ಶ್ರೀ ಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಕೊಲ್ಲೂರು ಶ್ರೀ ಮೂಕಾಂಬಿಕೆಯ ಅನನ್ಯ ಆರಾಧಕರು ಹಾಗೂ ಶ್ರೀ ಮೂಕಾಂಬಿಕ ಬಿಲ್ಡರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಚಂದ್ರಹಾಸ್ ಪಂಡಿತ್ ಹೌಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಧಾರ್ಮಿಕ ಶ್ರದ್ಧೆ, ಸಾಮಾಜಿಕ ಬದ್ಧತೆ ಹಾಗೂ ಸಂಘಟನಾ ಸಾಮರ್ಥ್ಯದಿಂದ ಗುರುತಿಸಿಕೊಂಡಿರುವ ಚಂದ್ರಹಾಸ್ ಪಂಡಿತ್ ಹೌಸ್ ಅವರ ಆಯ್ಕೆ ದೇವಸ್ಥಾನದ ದೈನಂದಿನ ಆಡಳಿತ, ಧಾರ್ಮಿಕ ಆಚರಣೆಗಳ ಸುವ್ಯವಸ್ಥೆ, ಭಕ್ತರಿಗೆ ಅನುಕೂಲವಾಗುವ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಕ್ಷೇತ್ರದ ಸಮಗ್ರ ಪ್ರಗತಿಗೆ ಅವರು ಮಹತ್ವದ ಕೊಡುಗೆ ನೀಡುವ ವಿಶ್ವಾಸ ವ್ಯಕ್ತವಾಗಿದೆ.
ಪೌರಾಣಿಕ ಹಿನ್ನೆಲೆಯಂತೆ ಕೋಲ ಮಹರ್ಷಿಗಳು ತಪಸ್ಸು ಮಾಡಿದ ಪವಿತ್ರ ಸ್ಥಳವೇ “ಕೊಲ್ಯ” ಎಂದು ನಾಮಾಂಕಿತವಾಗಿದ್ದು, ತಾಯಿ ಶ್ರೀ ಮೂಕಾಂಬಿಕೆಯ ಕೃಪೆಯಿಂದ ಈ ಕ್ಷೇತ್ರವು ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆಯುತ್ತಿದೆ. ನೂತನ ಅಧ್ಯಕ್ಷರ ನೇತೃತ್ವದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ, ಧಾರ್ಮಿಕ ಪ್ರವಾಸೋದ್ಯಮದ ಉತ್ತೇಜನ ಹಾಗೂ ಭಕ್ತರಿಗೆ ಇನ್ನಷ್ಟು ಸೌಲಭ್ಯಗಳು ಒದಗುವ ನಿರೀಕ್ಷೆ ವ್ಯಕ್ತವಾಗಿದೆ. ಈ ಮಹತ್ವದ ಜವಾಬ್ದಾರಿಯನ್ನು ಸ್ವೀಕರಿಸಿರುವ ಚಂದ್ರಹಾಸ್ ಪಂಡಿತ್ ಹೌಸ್ ಅವರು ಈ ಹಿಂದೆ ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಕಾರ್ಯಕರ್ತರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದವರು. ಉದ್ಯಮ ಕ್ಷೇತ್ರದಲ್ಲಿ ಶ್ರೀ ಮೂಕಾಂಬಿಕಾ ಕನ್ ಸ್ಟ್ರಕ್ಷನ್ಸ್ ಸಂಸ್ಥೆಯನ್ನು ಆರಂಭಿಸಿ ರಾಜ್ಯದ ವಿವಿದೆಡೆ ಬಹುಮಹಡಿ ಕಟ್ಟಡಗಳ ನಿರ್ಮಾಣದಲ್ಲಿ ಹೆಗ್ಗುರುತು ಸ್ಥಾಪಿಸಿದವರು. ಕುತ್ತಾರು ಪಂಡಿತ್ ಹೌಸ್ ನ ವಿಜಿಟಿ ಕ್ರಿಕೆಟ್ ತಂಡದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.



