ಬಳ್ಳಾರಿ, ಜನವರಿ 02: ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಯುವಕ ಮೃತಪಟ್ಟಿರುವ ವಿಚಾರವೀಗ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಬಳ್ಳಾರಿ ಎಂಎಲ್ಎ ನಾರಾ ಭರತ್ ರೆಡ್ಡಿ ವಿರುದ್ಧ ಸಮರಕ್ಕೆ ಕಾರಣವಾಗಿದೆ. ಉಭಯ ನಾಯಕರು ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆಯನ್ನೇ ಗೈಯುತ್ತಿದ್ದಾರೆ. ಇದು ನನ್ನ ಕೊಲೆಗೆ ನಡೆದ ಸಂಚು ಎಂದು ಆರೋಪಿಸಿದ್ದರೆ, ಅಕ್ರಮ ಗಣಿಗಾರಿಕೆ ವಿಷಯ ಡೈವರ್ಟ್ ಮಾಡಲು ಇಂತಹ ನೀಜ ಕೃತ್ಯಕ್ಕೆ ಜನಾರ್ದನ ರೆಡ್ಡಿ ಇಳಿದಿದ್ದಾನೆ ಎಂದು ಏಕವಚನದಲ್ಲೇ ಭರತ್ ರೆಡ್ಡಿ ಕಿಡಿಕಾರಿದ್ದಾರೆ. ಇದೆಲ್ಲದರ ನಡುವೆ ಯುವಕ ರಾಜಶೇಖರ್ ಸಾವಿಗೆ ಕಾರಣವಾದ ಬುಲೆಟ್ ಫೈರ್ ಮಾಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಬ್ಯಾನರ್ ವಿಚಾರವಾಗಿ ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜೊತೆಗೆ ಶಾಸಕ ಭರತ್ ರೆಡ್ಡಿ ಆಪ್ತನ ಬಾಡಿಗಾರ್ಡ್ಗಳು ಕೂಡ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣ ಸಂಬ0ಧ ಖಾಸಗಿ ಗನ್‌ಮ್ಯಾನ್‌ಗಳ ೩ಗನ್ ಸೀಜ್ ಮಾಡಿದ್ದಾರೆ. ಅವುಗಳನ್ನು ಪರಿಶೀಲನೆಗಾಗಿ ಈSಐಗೆ ಕಳುಹಿಸಲಾಗಿದೆ.
ಜನಾರ್ದನರೆಡ್ಡಿಗೆ ನೀಡಿದ್ದ ಗನ್‌ಮ್ಯಾನ್‌ಗಳ ಗನ್ ಸಹ ಪರಿಶೀಲನೆ ನಡೆಸಲಾಗಿದ್ದು, ರೆಡ್ಡಿ ಗನ್‌ಮ್ಯಾನ್‌ಗಳ ಗನ್‌ನಿಂದ ಬುಲೆಟ್ ಬಳಕೆ ಆಗದಿರುವುದು ಪತ್ತೆಯಾಗಿದೆ ಎಂದು ಟಿವಿ೯ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಬಳ್ಳಾರಿ ಘರ್ಷಣೆ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ವಾಲ್ಮೀಕಿ ಬ್ಯಾನರ್ ಹಾಕಿದ ವಿಚಾರವಾಗಿ ಗಲಾಟೆಯಾಗಿದೆ. ಮನೆಯ ರಸ್ತೆಯಲ್ಲಿ ಬ್ಯಾನರ್ ಹಾಕಲು ಜನಾರ್ದನರೆಡ್ಡಿ ವಿರೋಧಿಸಿದ್ದಾರೆ ಎನ್ನಲಾಗಿದೆ. ಆ ವಿಚಾರಕ್ಕೆ ಗಲಾಟೆ ನಡೆದು, ಕಾಂಗ್ರೆಸ್?ನ ಓರ್ವ ಕಾರ್ಯಕರ್ತ ಮೃತಪಟ್ಟಿದ್ದಾನೆ. ಆ ವೇಳೆ ಯಾರು ಫೈರ್ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದೇನೆ. ಆ ಬಗ್ಗೆ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುನ್ನೆಚ್ಚರಿಕೆಯಾಗಿ ದಾವಣಗೆರೆ ಐಜಿ ಘಟನಾ ಸ್ಥಳಕ್ಕೆ ಹೋಗಿದ್ದು, ಖಾಸಗಿ ಗನ್ ಮ್ಯಾನ್‌ಗಳ ರಿವಾಲ್ವಾರ್‌ಗಳನ್ನು ಸೀಜ್ ಮಾಡಿದ್ದಾರೆ. ಸತೀಶ್ ರೆಡ್ಡಿ ಗನ್‌ಮ್ಯಾನ್ ಫೈರ್ ಮಾಡಿದ್ದಾರೆ ಅಂತಾ ಹೇಳ್ತಿದ್ದಾರೆ. ಅದರ ಬಗ್ಗೆಯೂ ತನಿಖೆ ಆಗಬೇಕು. ಗಲಾಟೆ ಮಾಡಿದ ವಿಚಾರಕ್ಕೆ ಜನಾರ್ದನ ರೆಡ್ಡಿ ಸೇರಿ ೧೧ ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.



