ಉಳ್ಳಾಲ: ದಿನಾಂಕ 14/11/2025 ರಂದು ಉಳ್ಳಾಲ ತಾಲೂಕಿನ ಕುಂಪಲ ಮೂರು ಕಟ್ಟೆ ಪ್ರದೇಶದಲ್ಲಿ ನಾಯಿ ಕಚ್ಚಿದ ಪರಿಣಾಮ ದಯಾನಂದ (60) ಎಂಬವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇವಲ ಒಂದು ಅಪಘಾತವಲ್ಲ, ಬದಲಾಗಿ ಸ್ಥಳೀಯ ಆಡಳಿತದ ಗಂಭೀರ ನಿರ್ಲಕ್ಷ್ಯದ ಕಳಂಕವನ್ನು ಹೊತ್ತು ತಂದ ದುರಂತವಾಗಿದೆ.

ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ (ಅಸಹಜ ಸಾವು ಪ್ರಕರಣ) ದಾಖಲಾಗಿದ್ದು, ಪೋಸ್ಟ್ ಮಾರ್ಟಮ್ ವರದಿ ಈಗಾಗಲೇ ಠಾಣೆಗೆ ತಲುಪಿದೆ. ವರದಿಯಲ್ಲಿ ಪ್ರಾಣಿ ಕಚ್ಚಿದ ಪರಿಣಾಮ ಸಾವು ಸಂಭವಿಸಿದೆ ಎಂದು ಉಲ್ಲೇಖವಾಗಿದೆ. ಆದರೆ, ಇದು ನಾಯಿ ಕಚ್ಚಿ ಸಂಭವಿಸಿದ ಸಾವು ಆಗಿದೆಯೇ ಅಥವಾ ಇತರೆ ಯಾವುದೇ ಪ್ರಾಣಿ ಕಚ್ಚಿದ ಪರಿಣಾಮವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆಯ ಅವಶ್ಯಕತೆ ಇರುವುದರಿಂದ, ಪ್ರಕರಣವನ್ನು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಮಂಗಳೂರು ಗೆ ಕಳುಹಿಸಲಾಗಿದೆ.
ಆದರೆ, ಘಟನೆಗೆ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಳೆದರೂ ನ್ಯಾಯ ವಿಜ್ಞಾನ ಪ್ರಯೋಗಾಲಯದ ಅಂತಿಮ ವರದಿ ಇನ್ನೂ ಉಳ್ಳಾಲ ಪೊಲೀಸ್ ಠಾಣೆಗೆ ತಲುಪಿಲ್ಲ. ಈ ವರದಿ ಸರ್ಕಾರದ ಆದೇಶದಂತೆ ನೊಂದವರ ಕುಟುಂಬಕ್ಕೆ ಪರಿಹಾರ ನೀಡುವ ಮುಂದಿನ ಕಾನೂನು ಹಾಗೂ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಅತ್ಯಗತ್ಯವಾಗಿದ್ದು, ವರದಿ ವಿಳಂಬದಿಂದ ಕುಟುಂಬವು ತೀವ್ರ ಸಂಕಷ್ಟಕ್ಕೆ ಒಳಗಾಗಿದೆ.
ಈ ಬಗ್ಗೆ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕರನ್ನು ಸಂಪರ್ಕಿಸಿದರೂ ಸ್ಪಷ್ಟ ಉತ್ತರ ದೊರಕಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದಾಗಿ ಸಂಬಂಧಿಸಿದ ಇಲಾಖೆಯ ನಿರ್ದೇಶಕರಾದ ಡಾ. ದಿವ್ಯಾ ವಿ. ಗೋಪಿನಾಥ್, ಐಪಿಎಸ್ ಅವರು ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳುವರೇ ಎಂಬುದು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ, ಸಂಬಂಧಿಸಿದ ಇಲಾಖೆಗಳು ತಕ್ಷಣ ಎಚ್ಚೆತ್ತುಕೊಂಡು ವರದಿ ವಿಳಂಬಕ್ಕೆ ಕಾರಣವಾದ ನಿರ್ಲಕ್ಷ್ಯದ ವಿರುದ್ಧ ಸ್ಪಷ್ಟ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

