ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಪ್ಪಿನಂಗಡಿ: ಜಿಲ್ಲೆಯ ಜೀವನದಿ ನೇತ್ರಾವತಿ ನದಿಯನ್ನು ತಿರುಗಿಸಲು ಹೊರಟ ಸರಕಾರದ ಯೋಜನೆಯನ್ನು ವಿರೋಧಿಸಿ ಸಮಾನ ಮನಸ್ಕ ಸಂಘಟನೆಗಳು ಉಪ್ಪಿನಂಗಡಿಯಲ್ಲಿ ನಡೆಸಿದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಯಶಸ್ವಿಯಾಗಿದೆ.
ಪ್ರಾಣ ಬಿಟ್ಟೇವು ಆದರೆ ನೇತ್ರಾವತಿಯ ವಧೆ ಸಲ್ಲದು ಅನ್ನುವ ಘೋಷಣೆಯೊಂದಿಗೆ ಆರಂಭವಾದ ಪ್ರತಿಭಟನಾ ಜಾಥಾದಲ್ಲಿ ಸುಮಾರು 10,000ದಷ್ಟು ಮಂದಿ ಭಾಗವಹಿಸಿದ್ದರು. ಉಪ್ಪಿನಂಗಡಿ ಬೈಪಾಸಿನಲ್ಲಿರುವ ಆದಿತ್ಯ ಹೊಟೇಲಿನಿಂದ ಉಪ್ಪಿನಂಗಡಿ ಜಂಕ್ಷನ್ನಿನವರೆಗೆ ಪ್ರತಿಭಟನಾಕಾರರು ಜಾಥಾ ಮೂಲಕ ಸಾಗಿ ಬಳಿಕ ರಸ್ತೆಗೆ ಅಡ್ಡ ನಿಂತು ವಾಹನಗಳು ತೆರಳದಂತೆ ರಸ್ತೆ ತಡೆ ನಡೆಸಿದರು. ಯೋಜನೆ ವಿರೋಧಿಸಿ ರಚಿಸಿದ ಹಾಡುಗಳು, ವಿದ್ಯಾರ್ಥಿಗಳ ಆಕ್ರೋಶದ ಘೋಷಣೆಗಳು, ಜಿಲ್ಲೆಯ ಹಾಗೂ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರ ನಡೆ ಇಡೀ ರಾ.ಹೆ.ಯನ್ನು ಸ್ತಬ್ಧಗೊಳಿಸಿತ್ತು.
ಸರಕಾರಿ ಪದವಿ ಪೂರ್ವ ಶಾಲೆಯ ಬಳಿ ರಸ್ತೆ ತಡೆ ನಡೆಸಿದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರತಿಭಟನಕಾರರನ್ನು ಪೊಲೀಸರು ಬಲವಂತವಾಗಿ ಚದುರಿಸಲು ನೋಡಿದ್ದಾರೆ. ಈ ವೇಳೆ ಪ್ರತಿಭಟಿಸಿದ ಪ್ರಮುಖ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು, ಬಳಿಕ ಬಿಡುಗಡೆಗೊಳಿಸಿದ್ದಾರೆ.
ಇದಕ್ಕೂ ಮುಂಚೆ ಪ್ರತಿಭಟನಾ ನಿರತರ ಜೊತೆ ದ.ಕ ಜಿಲ್ಲಾ ಎಸ್.ಪಿ ಶರಣಪ್ಪ ಅವರು ಮನವಿ ಮಾಡಿ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದ್ದು, ಪ್ರತಿಭಟನಾಕಾರರು ಇದಕ್ಕೆ ಒಪ್ಪಲಿಲ್ಲ. ಬಳಿಕ ಪೊಲೀಸರು ಸುಮಾರು ನೂರಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಿದರು. ಈ ವೇಳೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗತೊಡಗಿದರು. ಬಂಧನಕ್ಕೊಳಗಾದ ಪ್ರತಿಭಟನಾಕಾರರನ್ನು ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಪ್ರಾಥಮಿಕ ಶಾಲೆ ಹಾಗೂ ಸ್ಥಳಿಯ ಪೊಲೀಸ್ ಠಾಣೆಯ ಬಳಿ ಪಹರೆಯಲ್ಲಿ ಇರಿಸಲಾಗಿದೆ.
ನೇತ್ರಾವತಿ ನದಿ ತಿರುವು ಯೋಜನೆ ವಿರೋಧೀ ಸಮಿತಿ ಸಂಚಾಲಕ ಡಾ.ನಿರಂಜನ್ ರೈ ಹಾಗೂ ಇತರ ಮುಖಂಡರು ಬಂಧನಕ್ಕೊಳಗಾದವರಲ್ಲಿ ಪ್ರಮುಖರಾಗಿದ್ದಾರೆ. ಮಧ್ಯಾಹ್ನ 1.45ರ ವೇಳೆಗೆ ಪ್ರತಿಭಟನಾ ಸ್ಥಳದಿಂದ ಎಲ್ಲ ಪ್ರತಿಭಟನಾಕಾರರು ತೆರಳಿದ್ದು. ಬಳಿಕ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೆಳಗ್ಗಿನ ಪ್ರತಿಭಟನೆಯ ವೇಳೆ ಸಂಸದ ನಳಿನ್ ಕುಮಾರ್ ಕಟೀಲು, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಬೆಳ್ತಂಗಡಿ ಶಾಸಕ ವಸಂತ ಬಂಗೇರ ನೇತ್ರಾವತಿ ನದಿ ತಿರುವು ವಿರೋಧಿ ಚಳವಳಿಯ ಸಂಚಾಲಕ ಡಾ.ನಿರಂಜನ್ ರೈ, ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ ಮಹಮ್ಮದ್ ದಾರಿಮಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿ, ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದ್ದರು.























































