ಉಳ್ಳಾಲ: ಪಕ್ಷ, ಧರ್ಮ, ರಾಜಕೀಯರಹಿತವಾಗಿ ಆಚರಿಸುವ ಕಾರ್ಯಕ್ರಮ ಕೊಣಾಜೆಯ ಮಣ್ಣಿನಲ್ಲಿ ನಡೆಯಲಿದೆ. ರಾಜ್ಯಮಟ್ಟದ ಸಮಿತಿಯ ನಿರ್ದೇಶನದಂತೆ ತಳಮಟ್ಟದಲ್ಲಿ ತನ್ನ ಕ್ಷೇತ್ರದ ಜನತೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಮಹಾನ್ ಚೇತನರ ಕಾರ್ಯಕ್ರಮಗಳನ್ನು ಯಶಸ್ಸುಗೊಳಿಸಿರಿ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.


ಡಿ.3 ರಂದು ಕೊಣಾಜೆ ಮೈದಾನದಲ್ಲಿ ಶಿವಗಿರಿ ಮಠ, ವರ್ಕಳ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಮುಖ್ಯಮಂತ್ರಿಯವರ ಉಪಸ್ಥಿತಿಯಲ್ಲಿ ಜರಗಲಿರುವ ಶತಮಾನ ಮಹಾಪ್ರಸ್ಥಾನ ಶ್ರೀ ನಾರಾಯಣ ಗುರು-ಗಾಂಧೀಜಿ ಸಂವಾದ ಶತಮಾನೋತ್ಸವ ಕುರಿತು ಡಿಸಿಸಿ ಸದಸ್ಯೆ ದೇವಕಿ ಆರ್ ಉಳ್ಳಾಲ್ ಇವರ ಬಂಡಿಕೊಟ್ಯದಲ್ಲಿರುವ ಸ್ವರ್ಣ ಕುಂಭ ಮನೆಯಲ್ಲಿ ಜರಗಿದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯಮಟ್ಟದಲ್ಲಿ ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ್ ರಂತಹ ಮುಖಂಡರು ಅಹರ್ನಿಶಿ ದುಡಿದು ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ತಳಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಜನತೆಯೂ ಭಾಗವಹಿಸಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿಸಿಕೊಳ್ಳುವ ಮೂಲಕ ಐತಿಹಾಸಿಕ ಕಾರ್ಯಕ್ರಮದ ಭಾಗವಾಗಿರಿ. ಅತ್ಯಂತ ಯಶಸ್ವಿ ಉತ್ಸವದ ಕಾರ್ಯಕ್ರಮವಾಗಿ ಪರಿವರ್ತಿಸುವ ಜವಾಬ್ದಾರಿಯಾಗಿದೆ. ಬೆಳಿಗ್ಗೆ ೧೦ ಕ್ಕೆ ಎಲ್ಲರೂ ಸೇರುವಂತಾಗಬೇಕು, ಮುಖ್ಯಮಂತ್ರಿಗಳು ಸ್ವಾಮೀಜಿಗಳ ಸಮ್ಮುಖದಲ್ಲಿ ಹೆಚ್ಚಿನ ಸಂಖ್ಯೆಯೊಂದಿಗೆ ಜನ ಭಾಗವಹಿಸುವಂತಾಗಬೇಕು. ಎಳೆಯ ಮಕ್ಕಳು ಭಾಗವಹಿಸಿದಾಗ ಇತಿಹಾಸ ತಿಳಿದುಕೊಳ್ಳುವವರು ಇತಿಹಾಸ ನಿರ್ಮಿಸುತ್ತಾರೆ ಅನ್ನುವ ನಾಣ್ಣುಡಿ ನಿಜವಾಗುವುದು ಎಂದರು.

ಕೇರಳ ತಿರುವನಂತಪುರದ ವರ್ಕಳ ಶಿವಗಿರಿ ಮಠದ ಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ನೇಹ, ವಾತ್ಸಲ್ಯ, ಪ್ರೀತಿಯನ್ನು ವಿಶ್ವಕ್ಕೆ ಪ್ರತಿಪಾದಿಸಿದವರು. ಅಂತಹ ಮಹಾನ್ ಚೇತನರ ಕಾರ್ಯಕ್ರಮಕ್ಕೆ ಸ್ಪೀಕರ್ ಯು.ಟಿ.ಖಾದರ್ ಅವರ ಮುತುವರ್ಜಿಯಲ್ಲಿ ಕ್ಷೇತ್ರ ಸಜ್ಜುಗೊಂಡಿದ್ದು, ಪಿ.ವಿ.ಮೋಹನ್, ಬಿ.ಕೆ ಹರಿಪ್ರಸಾದ್ ಅವರ ಅವಿರತ ಶ್ರಮ ಎಲ್ಲಾ ಮತ ಬಾಂಧವರಿಗೆ ಒಳಿತನ್ನು ಮಾಡಲಿದೆ. ಐತಿಹಾಸಿಕ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸಿ ಧನ್ಯಾರಗಿರಿ ಎಂದರು.

ಈ ಸಂದರ್ಭ ವಿವಿಧ ಪುರಸ್ಕಾರಗಳಿಗೆ ಭಾಜನರಾದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಡಿಸಿಸಿ ಸದಸ್ಯೆ ದೇವಕಿ ಆರ್ ಉಳ್ಳಾಲ್ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭ ಬಿಲ್ಲವ ಸಮಾಜ ಗ್ರಾಮಚಾವಡಿ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಬಂಗೇರ, ಉಳ್ಳಾಲ ನಗರಸಭೆ ಮಾಜಿ ಉಪಾಧ್ಯಕ್ಷೆ ಸ್ವಪ್ನಾ ಹರೀಶ್ , ಮಾಜಿ ಕೌನ್ಸಿಲರ್ ವೀಣಾ ಶಾಂತಿ ಡಿಸೋಜ, ಕೊಣಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಕಾಂಗ್ರೆಸ್ ವಕ್ತಾರ ದಿನೇಶ್ ಕುಂಪಲ, ಶ್ರೀ ಮಲರಾಯ ದೈವಸ್ಥಾನ ಸಮಿತಿ ಸದಸ್ಯರಾಗಿರುವ ಗೋಪಾಲ್ ಬಂಡಿಕೊಟ್ಯ, ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಪೂಜಾರಿ, ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್, ಸಾಹಿಲ್ ಮಂಚಿಲ, ಹರೀಶ್ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.
ದೇವಕಿ ಆರ್ ಉಳ್ಳಾಲ್ ಸ್ವಾಗತಿಸಿದರು.




