ಉಳ್ಳಾಲ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಚಿನ್ನಾಭರಣವನ್ನು 22 ಕ್ಯಾರೇಟಿನ ಚಿನ್ನವೆಂದು ನಂಬಿಸಿ ಅಡಮಾನ ಇಡುವ ಮೂಲಕ ಸಾಲ ಪಡೆದು ವಂಚನೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಒಟ್ಟು 9 ಕ್ಯಾರೇಟಿನ 141 ಗ್ರಾಂ ನಕಲಿ ಚಿನ್ನಾಭರಣಗಳು, 6 ಮೊಬೈಲ್ ಫೋನ್ಗಳು ಹಾಗೂ ₹47,000 ನಗದು ವಶಪಡಿಸಿಕೊಳ್ಳಲಾಗಿದೆ.

ನ.22 ರಂದು ಆರೋಪಿ ನೌಫಾಲ್ ಮತ್ತು ಝಹೀಮ್ ಅಹ್ಮದ್ ಎಂಬವರು ತೊಕ್ಕೊಟ್ಟು ದ್ವಾರಕ ಕಾಂಪ್ಲೆಕ್ಸ್ನ ಗುರು ರಾಘವೇಂದ್ರ ಫೈನಾನ್ಸ್ & ಇನ್ವೆಸ್ಟ್ಮೆಂಟ್ ಸಂಸ್ಥೆಯಲ್ಲಿ 9 ಕ್ಯಾರೇಟಿನ 41 ಗ್ರಾಂ ಚಿನ್ನಾಭರಣವನ್ನು 22 ಕ್ಯಾರೇಟಿನಂತೆ ತೋರಿಸಿ ಝಹೀಮ್ ಅಹ್ಮದ್ ಹೆಸರಿನಲ್ಲಿ ₹3,55,000 ಸಾಲ ಪಡೆದಿದ್ದರು. ಬಳಿಕ ನ 24 ರಂದು ಆರೋಪಿ ಇಮಿತಿಯಾಜ್ ಕೂಡ ಇದೇ ರೀತಿಯ ನಕಲಿ ಚಿನ್ನಾಭರಣವನ್ನು ಅಡಮಾನ ಇರಿಸಲು ಬಂದಾಗ ಸಂಸ್ಥೆಗೆ ಅನುಮಾನ ಉಂಟಾಗಿ ಚಿನ್ನಾಭರಣವನ್ನು ಪರಿಶೀಲಿಸಿದ್ದು ಅದು ನಕಲಿ ಚಿನ್ನ ಎನ್ನುವುದು ಬಹಿರಂಗವಾಯಿತು. ಇದನ್ನು ಆಧರಿಸಿ ನ. 25ರಂದು ಉಳ್ಳಾಲ ಠಾಣೆಯಲ್ಲಿ ಅಕ್ರ 248/2025 ಕ್ಕೆ ಪ್ರಕರಣ ದಾಖಲಿಸಲಾಯಿತು.
ಪ್ರಕರಣದ ತನಿಖೆಯಲ್ಲಿ ನ.25 ರಂದು ರಾತ್ರಿ 9 ಗಂಟೆಗೆ ತೊಕ್ಕೊಟ್ಟು ಜಂಕ್ಷನ್ ಬಳಿ ಆರೋಪಿ ಇಮ್ಮಿಯಾಜ್ ಮತ್ತು ಝಹೀಮ್ ಅಹ್ಮದ್ ಅವರನ್ನು ವಶಕ್ಕೆ ಪಡೆಯಲಾಗಿದೆ. ನಂತರ ನ.26ರಂದು ಬೆಳಿಗ್ಗೆ ಪಂಪ್ವೆಲ್ ಬಳಿಯಲ್ಲಿ ವಿಕ್ರಮ್ ಅಮೃತ್ಲಾಲ್ ಬಾಘಾ ಮತ್ತು ಮೊಹಮ್ಮದ್ ಇಸ್ಮಾಯಿಲ್ ಅವರನ್ನು, ಅದೇ ದಿನ ಬೆಳಗ್ಗೆ 10.15ಕ್ಕೆ ಮಂಗಳೂರಿನ ಕೆಪಿಟಿ ಬಳಿ ಮೊಹಮ್ಮದ್ ಬಿಸ್ಟಾ ಹಾಗೂ ಉಮ್ಮರ್ ಫಾರೂಕ್ ಅವರನ್ನು ಬಂಧಿಸಲಾಗಿದೆ.
ಬಂಧಿತ ವಿಕ್ರಮ್ ಅಮೃತ್ಲಾಲ್ ಬಾಘಾ ಅವರ ಬಳಿಯಿಂದ ₹47,000 ನಗದು, ಉಮ್ಮರ್ ಫಾರೂಕ್ ಅವರಿಂದ 9 ಕ್ಯಾರೇಟಿನ 20 ಗ್ರಾಂ ತೂಕದ ಚಿನ್ನದಂತೆ ಕಾಣುವ ಚೈನ್, ಮೊಹಮ್ಮದ್ ಬಿಸ್ಟಾ ಅವರಿಂದ 25 ಗ್ರಾಂ ತೂಕದ 6 ಉಂಗುರಗಳು, ಝಹೀಮ್ ಅಹ್ಮದ್ ಅಡಮಾನ ಇಟ್ಟಿದ್ದ 41 ಗ್ರಾಂ ಚೈನ್, ಇಮ್ಮಿಯಾಜ್ ನೀಡಿದ್ದ 55 ಗ್ರಾಂ ಚೈನ್ ಮತ್ತು ಒಂದು ಬ್ರಾಸ್ ಲೈಟ್ ವಶಪಡಿಸಿಕೊಳ್ಳಲಾಗಿದೆ.
ಘಟನೆಯಲ್ಲಿ ಬಳಸಲಾಗಿದ್ದ 9 ಕ್ಯಾರೇಟಿನ ನಕಲಿ ಚಿನ್ನಾಭರಣಗಳನ್ನು ಪೂರೈಕೆ ಮಾಡುವ ಪ್ರಮುಖ ಆರೋಪಿ ವಿಕ್ರಮ್ ಅಮೃತ್ಲಾಲ್ ಬಾಘಾ ಎಂಬಾತನ ಪಾತ್ರವೂ ತನಿಖೆಯಿಂದ ಬಹಿರಂಗವಾಗಿದ್ದು, ಆರೋಪಿಗಳ ಮೇಲಿನ ಮುಂದಿನ ತನಿಖೆ ಪ್ರಗತಿಯಲ್ಲಿದೆ.



