




ತೊಕ್ಕೊಟ್ಟು: ಉಳ್ಳಾಲ – ತೊಕ್ಕೊಟ್ಟು ಪ್ರದೇಶದ ಖ್ಯಾತ ಸಾಮಾಜಿಕ ಕಾರ್ಯಕರ್ತೆ, ಬಿಜೆಪಿ ಮುಖಂಡೆ ಲಲಿತಾ ಡಿ ಸುಂದರ್ (79) ಇಂದು ಸಂಜೆ ತಮ್ಮ ತೊಕ್ಕೊಟ್ಟು ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಲಲಿತಾ ಡಿ ಸುಂದರ್, 1975ರ ತುರ್ತು ಪರಿಸ್ಥಿತಿಯ ಸಮಯದಲ್ಲೂ ಹೋರಾಟಗಾರರಿಗೆ ನೆರವಾಗಿದ್ದರು. ಮಹಿಳಾ ದೌರ್ಜನ್ಯಕ್ಕೆ ವಿರುದ್ದ ಹೋರಾಡಿ ಅನೇಕ ಅಶಕ್ತ, ಬಡ ಮಹಿಳೆಯರಿಗೆ ನೆರವಾಗಿದ್ದರು. ಬಡ ಹೆಣ್ಣು ಮಕ್ಕಳ ವಿವಾಹ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಅಪಘಾತಕ್ಕೀಡಾದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದರು. ತೊಕ್ಕೊಟ್ಟುವಿನ ಹೃದಯಭಾಗದಲ್ಲಿರುವ ತಮ್ಮ ಕಟ್ಟಡದಲ್ಲಿ ಅನೇಕ ವರ್ಷಗಳ ಕಾಲ ಭಾರತೀಯ ಜನತಾ ಪಕ್ಷದ ಕಚೇರಿಗಾಗಿ ಉಚಿತವಾಗಿ ಒದಗಿಸುತ್ತಾ ಬಂದಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾ ದ.ಕ. ಘಟಕ, ಸಮುದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷೆ, ಜನ್ಮಭೂಮಿ ಸಹಕಾರಿ ಸಂಘದ ನಿರ್ದೇಶಕಿ ಸೇರಿದಂತೆ ಹಲವು ಸಂಘಟನೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ್ದರು. ಸೇವಾ ಮನೋಭಾವದಿಂದ ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತೆ ಎಂದು ಖ್ಯಾತರಾಗಿದ್ದರು. ಉಳ್ಳಾಲ ಪುರಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾಗಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಉಳ್ಳಾಲದ ವೀರರಾಣಿ ಅಬ್ಬಕ್ಕೋತ್ಸವ ಸಮಿತಿ, ಕೊಲ್ಯ ಶ್ರೀ ಶಾರದೋತ್ಸವ ಸಮಿತಿ, ಕುತ್ತಾರು ಶ್ರೀ ರಾಜರಾಜೇಶ್ವರಿ–ಸಿದ್ದಿವಿನಾಯಕ ಮಂದಿರ ಸಮಿತಿ ಮೊದಲಾದ ಸಂಸ್ಥೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿದ್ದರು. ತಮ್ಮ ತೊಕ್ಕೊಟ್ಟುವಿನ ಶ್ರೀ ರಾಘವೇಂದ್ರ ಫ್ಯಾನ್ಸಿ ಅಂಗಡಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ವರ್ಷಗಳಿಂದ ನಿರಂತರವಾಗಿ ಮುಂದುವರೆಸಿದ ಕರುಣಾ ಹೃದಯಿ ಲಲಿತಾ ಸುಂದರ್ ಜನಸ್ನೇಹ ಮತ್ತು ಸೌಜನ್ಯದ ಪ್ರತಿರೂಪವಾಗಿದ್ದರು. ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರ ನ.21 ರ ಬೆಳಿಗ್ಗೆ 10.00 ಕ್ಕೆ ಚೆಂಬುಗುಡ್ಡೆ ಸ್ಮಶಾನದಲ್ಲಿ ಜರಗಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸ್ಪೀಕರ್ ಯು.ಟಿ.ಖಾದರ್, ಸಂಸದ ಬೃಜೇಶ್ ಚೌಟ, ಮಾಜಿ ಶಾಸಕ ಜಯರಾಮ ಶೆಟ್ಟಿ, ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಪ್ರೈ.ಲಿ. ನಿಕಟಪೂರ್ವ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಮಂಡಲ ಮಾಜಿ ಅಧ್ಯಕ್ಷರುಗಳಾದ ಚಂದ್ರಹಾಸ್ ಪಂಡಿತ್ ಹೌಸ್, ಚಂದ್ರಶೇಖರ್ ಉಚ್ಚಿಲ್ , ಚಂದ್ರಹಾಸ್ ಉಳ್ಳಾಲ್, ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

