ಮುಡಿಪು; ‘ಸಂಗೀತ, ನೃತ್ಯ, ಸಾಹಿತ್ಯ ಇವುಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ಸಾಧ್ಯ. ಸಾಹಿತ್ಯಕ್ಷೇತ್ರ ಮತ್ತು ಸಮಾಜದಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ನಡೆಯದೇ ಇದ್ದರೆ ಅದು ಅಪಾಯಕಾರಿ ಸಂಗತಿ’ ಎಂದು ಹೆಸರಾಂತ ಕಲಾವಿದೆ ಡಾ. ಕೆ.ಎಸ್ ಪವಿತ್ರ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ವಿವೇಕ ರೈ ವಿಚಾರ ವೇದಿಕೆಯಲ್ಲಿ ಕನಕ ಜಯಂತಿ ಪ್ರಯುಕ್ತ ನಡೆದ ‘ಕನಕ ಕೀರ್ತನ ಗಂಗೋತ್ರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‘ಕನಕದಾಸರ ಕೀರ್ತನೆಗಳಲ್ಲಿ ವೈಚಾರಿಕತೆ, ಭಾವನಾತೀವ್ರತೆ ಇದೆ. ನಾವು ಅಹಂ ಬಿಟ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕೆಲಸ ಮಾಡದೇ ಇದ್ದರೆ ಸಮಾಜದಲ್ಲಿ ಎಲ್ಲಾ ಬಗೆಯ ಅಸಮಾನತೆ ಸೃಷ್ಟಿಯಾಗುವ ಅಪಾಯವಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ನಾಗಪ್ಪ ಗೌಡ ಆರ್ ಮಾತಾಡಿ, ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಸವಣ್ಣನಂತೆ ಕನಕದಾಸರು ಪ್ರಮುಖರು. ಇಂದಿನ ಯುವ ಜನಾಂಗವು ಕನಕದಾಸರನ್ನು ಕೇವಲ ಭಕ್ತಿಯ ನೆಲೆಯಲ್ಲಿ ನೋಡದೆ ವೈಚಾರಿಕ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಕನಕದಾಸರು ಸಮುದಾಯದ ನಡುವೆ ಇದ್ದು ಅಸಮಾನತೆಯನ್ನು ವಿರೋಧಿಸಿ ವೈಚಾರಿಕ ಪ್ರಜ್ಣೆಯನ್ನು ಬಿತ್ತಿದವರು. ಕೇಂದ್ರವು ಕನಕದಾಸರ ವಿಚಾರಗಳನ್ನು ಯುವತಲೆಮಾರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಎಚ್. ದೇವೇಂದ್ರಪ್ಪ, ವಿಶ್ರಾಂತ ಪ್ರಾಧ್ಯಾಪಕ
ಡಾ. ಶಿವರಾಮ ಶೆಟ್ಟಿ, ಕನ್ನಡ ಪ್ರಾಧ್ಯಾಪಕರಾದ ಪ್ರೊ. ಸೋಮಣ್ಣ ಹೊಂಗಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಆಶ್ರಿತಾ ವಂದಿಸಿದರು.ವಿದ್ಯಾರ್ಥಿ ಅಭಿಷೇಕ್ ವಾಲ್ಮೀಕಿ ಕಾರ್ಯಕ್ರಮ ನಿರೂಪಿಸಿದರು.



