ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಸೇವಿಸಲು ಅವಕಾಶ ನೀಡುವ ಹಾಗೂ ಸಿಗರೇಟ್ಗಳನ್ನು ಚಿಲ್ಲರೆಯಾಗಿ ಮಾರುವ ಅಂಗಡಿ ಹೋಟೆಲ್ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ರಾಜು ಕೆ. ಸೂಚಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಹಾಗೂ ಪಾನ್ ಮತ್ತಿತರ ತಂಬಾಕುಗಳನ್ನು ಮಾರುವಂತಿಲ್ಲ. ಸಿಗರೇಟ್ಗಳ ಇಡೀ ಪ್ಯಾಕ್ನಲ್ಲಿ ಮಾರಬೇಕೇ ಹೊರತು ಬಿಡಿಯಾಗಿ ಮಾರುವಂತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ಗಳು ಆಗಾಗ್ಗೆ ಅಂಗಡಿ, ಹೋಟೆಲ್ ತಪಾಸಣೆ ನಡೆಸಿ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಅಂತಹ ಅಂಗಡಿಗಳನ್ನು ಮುಚ್ಚಿಸಿ ಜಪ್ತಿ ಮಾಡಬೇಕು ಎಂದರು.
ಈ ಬಗ್ಗೆ ಮುಂದಿನ ಸಭೆಯೊಳಗೆ ಎಷ್ಟು ಅಂಗಡಿಗಳಿಗೆ ಭೇಟಿ ನೀಡಲಾಗಿದೆ. ಎಷ್ಟು ಉಲ್ಲಂಘನೆ ಕಂಡು ಬಂದಿದೆ? ದಂಡ ವಿಧಿಸಿರುವ ಹಾಗೂ ಅಂಗಡಿಗಳನ್ನು ಜಪ್ತಿ ಮಾಡಿರುವ ವಿವರಗಳನ್ನು ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಅಧಿಕಗೊಂಡಿದ್ದು, ಧೂಮಪಾನ ತಂಬಾಕು ಸೇವನೆಯೇ ಕಾರಣವಾಗಿದೆ. ಜನರ ಜೀವನ ಮತ್ತು ಆರೋಗ್ಯ ತುಂಬಾ ಮುಖ್ಯ. ಆರೋಗ್ಯದ ವಿರುದ್ಧ ಚೆಲ್ಲಾಟವಾಡುವವರನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದರು.
ಸಹಾಯಕ ಪೊಲೀಸ್ ಆಯುಕ್ತ ವಿಜಯ ಕ್ರಾಂತಿ ಮಾತನಾಡಿ, ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆ ಮಾಡುವವರ ವಿರುದ್ಧ 1,756 ಪ್ರಕರಣ ದಾಖಲಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕ ಡಾ| ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

