AI Generated Hate in India ಅಥವಾ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಭಾರತದಲ್ಲಿ ಬಿತ್ತಲಾಗುತ್ತಿರುವ ದ್ವೇಷ..’ ಎಂಬ ಶೀರ್ಷಿಕೆಯಲ್ಲಿ ಇತ್ತೀಚೆಗೆ ಒಂದು ವರದಿ ಬಿಡುಗಡೆಗೊಂಡಿತ್ತು. ಸೆಂಟರ್ ಫಾರ್ ದ ಸ್ಟಡಿ ಆಫ್ ಆನ್‌ಲೈನ್ ಹೇಟ್ ಎಂಬ ಸಂಸ್ಥೆಯು ಬಿಡುಗಡೆಗೊಳಿಸಿದ ಈ ವರದಿಯಲ್ಲಿ ದಂಗುಬಡಿಸುವ ಹಲವು ಮಾಹಿತಿಗಳಿದ್ದವು. ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಭಾವನೆ ಜೀವಂತವಾಗಿರುವುದಕ್ಕೆ ಏನು ಕಾರಣ ಎಂಬ ಬಗ್ಗೆ ಹುಡುಕಾಟವನ್ನು ನಡೆಸಬಯಸುವ ಯಾರಿಗೇ ಆಗಲಿ ಈ ವರದಿಯಲ್ಲಿರುವ ಅಂಶಗಳು ಬಹಳ ಪ್ರಯೋಜನಕಾರಿಯಾಗಬಲ್ಲವು.

2023ರಿಂದ 2025ರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿರುವ ವೀಡಿಯೋ ಮತ್ತು ಚಿತ್ರಗಳನ್ನು ಈ ಸಂಸ್ಥೆಯು ಪರಿಶೀಲನೆಗೆ ಒಡ್ಡಿತು. ಮುಖ್ಯವಾಗಿ ಇನ್‌ಸ್ಟಾಗ್ರಾಮ್, ಎಕ್ಸ್ ಜಾಲತಾಣ ಮತ್ತು ಫೇಸ್‌ಬುಕ್‌ಗಳ ಮೇಲೆ ಗಮನಹರಿಸಿದ ಸಂಸ್ಥೆಯು ಈ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ವೀಡಿಯೋಗಳು ಮತ್ತು ಚಿತ್ರಗಳಲ್ಲಿ ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದವುಗಳು ಎಷ್ಟಿವೆ ಎಂಬುದರ ಪತ್ತೆಗೆ ತೊಡಗಿತು. ಒಟ್ಟು 297 ಸಾಮಾಜಿಕ ಜಾಲತಾಣಗಳಲ್ಲಿ 1326ಕ್ಕಿಂತಲೂ ಅಧಿಕ ಎಐ ವೀಡಿಯೋ ಮತ್ತು ಚಿತ್ರಗಳು ಹಂಚಿಕೆಯಾಗಿರುವುದನ್ನು ಸಂಸ್ಥೆ ಕಂಡುಕೊಂಡಿತು. ಇವುಗಳಿಗೆ 27 ಮಿಲಿಯನ್‌ಗಿಂತಲೂ ಅಧಿಕ ಎಂಗೇಜ್‌ಮೆಂಟ್‌ಗಳನ್ನು ಅದು ಪತ್ತೆಹಚ್ಚಿತು.
ಇವುಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 1.8 ಮಿಟಿಲಿಯನ್ ಎಂಗೇಜ್‌ಮೆಂಟ್‌ಗಳಿದ್ದರೆ ಎಕ್ಸ್ ಜಾಲತಾಣದಲ್ಲಿ 7,72,400 ಎಂಗೇಜ್‌ಮೆಂಟ್‌ಗಳಿದ್ದುವು. ಫೇಸ್‌ಬುಕ್‌ನಲ್ಲಿ 1,43,200 ಎಂಗೇಜ್‌ಮೆಂಟ್‌ಗಳು. ಮಿಲಿಯನ್‌ಗಟ್ಟಲೆ ವೀಕ್ಷಣೆಗಳು ಮತ್ತು ಅಸಂಖ್ಯ ಸಂಖ್ಯೆಯಲ್ಲಿ ಹಂಚಿಕೆಗಳು ನಡೆದಿದ್ದುವು. ಪ್ರತಿಕ್ರಿಯೆಗಳಂತೂ ಕೇಳುವುದೇ ಬೇಡ. ಈ ವೀಡಿಯೋಗಳು ಮತ್ತು ಚಿತ್ರಗಳಲ್ಲಿ ಅತೀ ಹೆಚ್ಚು ಮುಸ್ಲಿಮ್ ಮಹಿಳೆಯರಿಗೆ ಸಂಬಂಧಿಸಿತ್ತು. ಮುಸ್ಲಿಮ್ ಮಹಿಳೆಯರ ಲೈಂಗಿಕ ಚಿತ್ರಣಗಳನ್ನು ಅತ್ಯಂತ ಕೆಟ್ಟದಾಗಿ ಮತ್ತು ಅತ್ಯಂತ ಅವಮಾನಕಾರಿಯಾಗಿ ಇವುಗಳಲ್ಲಿ ಬಿಂಬಿಸಲಾಗಿತ್ತು.
ನಿಜವಾಗಿ, ಇಸ್ಲಾಮೋಫೋಬಿಕ್ ಅಥವಾ ಇಸ್ಲಾಮ್‌ನ ಬಗ್ಗೆ ಭೀತಿಯನ್ನು ಹರಡುವ ಅತ್ಯಂತ ವ್ಯವಸ್ಥಿತ ಜಾಲವೊಂದು ಯೋಜನಾಬದ್ಧವಾಗಿ ಕೆಲಸ ಮಾಡುತ್ತಿರುವುದನ್ನು ಈ ಅಧ್ಯಯನ ಬಹಳ ಪರಿಣಾಮಕಾರಿಯಾಗಿ ಬೆಳಕಿಗೆ ತಂದಿದೆ. ಮುಸ್ಲಿಮರನ್ನು ಕೆಟ್ಟವರಂತೆ, ಹೆಣ್ಣುಬಾಕರಂತೆ, ಹಿಂದೂ ವಿರೋಧಿಗಳಂತೆ, ದೇಶದ್ರೋಹಿಗಳಂತೆ, ಅನ್ನಕ್ಕೆ ಉಗುಳುವವರಂತೆ, ಹೆಚ್ಚು ಹೆಚ್ಚು ಮಕ್ಕಳನ್ನು ಹುಟ್ಟಿಸುವವರಂತೆ, ಬಹುಪತ್ನಿವಲ್ಲಭರಂತೆ, ಬಹುತ್ವವನ್ನು ಒಳಗೊಳ್ಳದವರಂತೆ, ಕೊಳಕರಂತೆ.. ಇತ್ಯಾದಿ ಇತ್ಯಾದಿ ರೂಪದಲ್ಲಿ ಈ 1326 ವೀಡಿಯೋ ಮತ್ತು ಚಿತ್ರಗಳು ಚಿತ್ರಿಸಿರುವುದಾಗಿ ಈ ಅಧ್ಯಯನವು ಕಂಡುಕೊಂಡಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮುಂತಾದುವುಗಳ ಭಯವನ್ನು ವ್ಯವಸ್ಥಿತವಾಗಿ ಎಐ ತಂತ್ರಜ್ಞಾನದ ಮೂಲಕ ಬಿತ್ತಲಾಗುತ್ತಿದೆ. ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡಲಾಗುತ್ತಿದೆ.
ಮುಖ್ಯವಾಗಿ, ಈ ಸುಳ್ಳಿನ ಬೃಹತ್ ಪ್ರಚಾರ ಯುದ್ಧದ ಹಿಂದೆ ಮೂರು ಬಲಪಂಥೀಯ ಮಾಧ್ಯಮಗಳ ಪಾತ್ರವನ್ನು ಸಮೀಕ್ಷೆಯಲ್ಲಿ ವಿಶೇಷವಾಗಿ ಎತ್ತಿ ಹೇಳಲಾಗಿದೆ. ಓಪ್ ಇಂಡಿಯಾ, ಸುದರ್ಶನ್ ಟಿವಿ ಚಾನೆಲ್ ಮತ್ತು ಪಾಂಚಜನ್ಯಗಳು ಈ ಅಪಪ್ರಚಾರಕ್ಕೆ ದೊಡ್ಡಮಟ್ಟದಲ್ಲಿ ಕೊಡುಗೆಯನ್ನು ನೀಡುತ್ತಿವೆ ಎಂದೂ ಸಮೀಕ್ಷೆ ಕಂಡುಕೊಂಡಿದೆ. ಒಂದುರೀತಿಯಲ್ಲಿ,
ಎಐ ತಂತ್ರಜ್ಞಾನವು 28 ವರ್ಷಕ್ಕಿಂತ ಕೆಳಗಿನ ಯುವ ತಲೆಮಾರಿನ ಪಾಲಿಗೆ ಅತ್ಯಂತ ಪರಿಚಿತವೇ ಹೊರತು ಇದಕ್ಕಿಂತ ಮೇಲಿನ ಪ್ರಾಯದ ಬಹುದೊಡ್ಡ ಜನಸಮೂಹವು ಇದರ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಬಹಳ ಕಡಿಮೆ. ಈ ತಂತ್ರಜ್ಞಾನದ ಮೂಲಕ ವ್ಯಕ್ತಿಯೋರ್ವ ಹೇಳಿಯೇ ಇರದ ಅಥವಾ ಎಲ್ಲೂ ಘಟಿಸಿಯೇ ಇರದ ಸಂಗತಿಯನ್ನು ಘಟಿಸಿದಂತೆ ಮತ್ತು ಹೇಳಿ ದಂತೆ ಬಿಂಬಿಸಲು ಸಾಧ್ಯವಿದೆ. ಉದಾಹರಣೆಗೆ, ಅಫಘಾನ್ ವಿದೇಶ ಸಚಿವ ಮುತ್ತಕಿ ಅವರ ವೀಡಿಯೋ. ಅವರ ಭಾರತ ಭೇಟಿಗೆ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಯಿತು. ಅವರಿಗೆ ಕೆಂಪು ಹಾಸಿನ ಸ್ವಾಗತ ಕೋರಿದ ಮೋದಿ ಸರಕಾರವನ್ನು ಅವರದೇ ಬೆಂಬಲಿಗರು ಕಟಕಟೆಯಲ್ಲಿ ನಿಲ್ಲಿಸಿದರು. ತಾಲಿಬಾನನ್ನು ಮೂಲಭೂತವಾದಿ ಎಂದು ಮೊನ್ನೆವರೆಗೆ ಈ ಸರಕಾರದ ಪ್ರಮುಖರೇ ಕರೆದಿರುವುದನ್ನು ಪಕ್ಷಭೇದವಿಲ್ಲದೇ ಜನರು ನೆನಪಿಸಿದರು.
4 ವರ್ಷಗಳ ಹಿಂದೆ ಅಫಘಾನನ್ನು ತಾಲಿಬಾನ್ ವಶಪಡಿಸಿಕೊಂಡಾಗ ಅದನ್ನು ಸ್ವಾಗತಿಸಿದ ಸಮಾಜವಾದಿ ಪಕ್ಷದ ಸಂಸದ ಶಫೀಕರ‍್ರಹ್ಮಾನ್ ಮೇಲೆ ಯೋಗಿ ಆದಿತ್ಯನಾಥ್ ಸರಕಾರ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನು ಜನರು ಉಲ್ಲೇಖಿಸಿದರು. ಅಲ್ಲದೇ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಪಟ್ಟಿಯಲ್ಲಿ ಈ ಮುತ್ತಕಿ ಈಗಲೂ ಭಯೋತ್ಪಾದಕ ಎಂದೇ ಗುರುತಿಸಿಕೊಂಡಿರುವುದನ್ನು ಎತ್ತಿ ಹೇಳಿದರು. ಮೊನ್ನೆಮೊನ್ನೆರೆಗೆ ಮೂಲಭೂತವಾಗಿಯಾಗಿದ್ದ ತಾಲಿಬಾನ್ ಒಮ್ಮಿಂದೊಮ್ಮೆಲೇ ಸರ್ವಗುಣ ಸಂಪನ್ನವಾದುದು ಹೇಗೆ ಎಂದು ಪ್ರಶ್ನಿಸಿದರು. ಇಂಥ ಸಮಯದಲ್ಲಿ ಮುತ್ತಕಿಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತು. ‘ನಾವು ಅಫಘಾನ್‌ನಲ್ಲಿ ಭಗವಾನ್ ಶಿವ ಮತ್ತು ವಿಷ್ಣುವಿನ ಮಂದಿರ ಕಟ್ಟುತ್ತೇವೆ, ಜೈಶ್ರೀರಾಮ್ ಎಂದು ಕೂಗುತ್ತೇವೆ, ನಮ್ಮನ್ನು ಬೆಂಬಲಿಸಿದ ಪ್ರಧಾನಿ ಮೋದಿಗೆ ಕೃತಜ್ಞತೆಗಳು..’ ಎಂದು ಆ ವೀಡಿಯೋದಲ್ಲಿ ಮುತ್ತಕಿ ಹೇಳಿದರು.
ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಹಂಚಿಕೆ ಮಾಡಲಾಯಿತು. ವಾಟ್ಸಪ್‌ಗಳಲ್ಲೂ ಮಿತಿಯಿಲ್ಲದೇ ಶೇರ್‌ಗಳಾದುವು. ಮೋದಿ ಸರಕಾರ ಹೇಗೆ ಅಫಘಾನ್‌ನ ತಾಲಿಬಾನನ್ನೇ ಮಣಿಸಿದೆ ಮತ್ತು ಜೈಶ್ರೀರಾಮ್ ಎಂದು ಅವರ ಬಾಯಿಂದಲೇ ಕೂಗಿಸಿದೆ ಎಂದು ಬೆನ್ನು ತಟ್ಟಿಕೊಳ್ಳಲಾಯಿತು. ನಿಜ ಏನೆಂದರೆ,
ಇದು ಎಐ ವೀಡಿಯೋ. ಮುತ್ತಕಿಯವರ ತುಟಿ ಚಲನೆಗೆ ಹೊಂದುವಂತೆ ಮತ್ತು ಅವರದೇ ಧ್ವನಿಯನ್ನು ಹೋಲುವಂತೆ ತಂತ್ರಜ್ಞಾನದ ಮೂಲಕ ಈ ವೀಡಿಯೋವನ್ನು ಕೃತಕವಾಗಿ ತಯಾರಿಸಲಾಗಿದೆ. ಈ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದವರು ಅದನ್ನು ಮುತ್ತಕಿಯವರದ್ದೇ ವೀಡಿಯೋ ಎಂದೇ ಖಂಡಿತ ನಂಬಿಯಾರು. ಅಷ್ಟೊಂದು ಚೆನ್ನಾಗಿ ಮತ್ತು ನಿಜ ಎಂದೇ ನಂಬುವ ರೀತಿಯಲ್ಲಿ ಎಐ ತಂತ್ರಜ್ಞಾನದ ಮೂಲಕ ವೀಡಿಯೋವನ್ನು ತಯಾರಿಸಲು ಸಾಧ್ಯವಾಗುತ್ತಿದೆ. ಅಷ್ಟಕ್ಕೂ,
ಮುತ್ತಕಿಯಂಥ ಓರ್ವ ಸಚಿವರನ್ನೇ ಈ ರೀತಿಯಾಗಿ ವಿಕೃತಗೊಳಿಸಬಹುದು ಎಂದಾದರೆ ಮತ್ತು ಕಾನೂನಿನ ಭಯವಿಲ್ಲದೇ ವೀಡಿಯೋ ತಯಾರಿಸಲಾಗುತ್ತದೆ ಎಂದಾದರೆ, ಇತರರ ಬಗ್ಗೆ ಹೇಳುವುದಕ್ಕಾದರೂ ಏನಿದೆ? ಮುಸ್ಲಿಮ್ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಕ್ಕಾಗಿ ಹೇಗೆಲ್ಲ ಮತ್ತು ಏನೆಲ್ಲ ವೀಡಿಯೋಗಳನ್ನು ಇವರು ತಯಾರಿಸಿರಬಹುದು? ಇಂಥ ವೀಡಿಯೋಗಳಿಗೆ ಈ ದೇಶದಲ್ಲಿ ಬಹುದೊಡ್ಡ ವೀಕ್ಷಕರಿದ್ದಾರೆ. ಅವರಿಗೆ ಇಂಥ ವೀಡಿಯೋ ಮತ್ತು ಚಿತ್ರಗಳ ಅಸಲಿಯತ್ತು ಏನೆಂದೇ ಗೊತ್ತಿರುವುದಿಲ್ಲ. ವಾಟ್ಸಪ್‌ಗಳಲ್ಲಿ ಬರುವ ಮತ್ತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಇಂಥ ವೀಡಿಯೋ ಮತ್ತು ಚಿತ್ರಗಳನ್ನು ಅವರು ನಿಜ ಎಂದೇ ನಂಬಿ ವೀಕ್ಷಿಸುತ್ತಿರುತ್ತಾರೆ. ಇತರರಿಗೆ ಫಾರ್ವರ್ಡ್ ಮಾಡುತ್ತಿರುತ್ತಾರೆ. ಮಾತ್ರವಲ್ಲ, ಇಂಥವುಗಳಿಂದ ಪ್ರೇರಿತರಾಗಿ ಅಪಾರ ಧರ್ಮದ್ವೇಷವನ್ನು ಬೆಳೆಸಿಕೊಂಡಿರುತ್ತಾರೆ.
ಸದ್ಯ, ತಂತ್ರಜ್ಞಾನ ಆಧಾರಿತ ದ್ವೇಷ ಚಟುವಟಿಕೆಯನ್ನು ಪತ್ತೆಹಚ್ಚುವ, ತಡೆಯುವ ಮತ್ತು ಕಾನೂನು ಕ್ರಮಗಳಿಗೆ ಒಳಪಡಿಸುವ ತುರ್ತು ಕ್ರಮಗಳು ಆಗಬೇಕಿದೆ. ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದರಿಂದ ಈ ದೇಶದ ನಿಜವಾದ ಸಮಸ್ಯೆಗಳನ್ನು ಜನರ ಕಣ್ಣಿನಿಂದ ಮರೆಸಿಡಬಹುದು ಎಂದು ನಂಬಿರುವ ವರ್ಗವೊಂದು ಈ ಕುಕೃತ್ಯದಲ್ಲಿ ತೊಡಗಿಸಿಕೊಂಡಿದೆ. ರಾಜಕೀಯ ಅಧಿಕಾರ ಮತ್ತು ಸಾಮಾಜಿಕ ಹಿಡಿತ ಸಾಧಿಸುವುದೇ ಇವರ ಮುಖ್ಯ ಗುರಿ. ಅಧಿಕಾರ ಎಂದೂ ಕೈತಪ್ಪದೇ ಇರಬೇಕಾದರೆ ಮತ್ತು ಸಮಾಜದ ಮೇಲಿನ ಹಿಡಿತಕ್ಕೆ ಯಾವುದೇ ಸವಾಲು ಎದುರಾಗದೇ ಇರಬೇಕಾದರೆ ಮುಸ್ಲಿಮ್ ಭೂತವನ್ನು ಜೀವಂತವಾಗಿ ಇಟ್ಟುಕೊಂಡರೆ ಸಾಕು ಎಂಬುದಾಗಿ ಅದು ಭಾವಿಸಿದೆ.
ಇಸ್ಲಾಮನ್ನು ಭೀತಿಕಾರಕವಾಗಿ ಮತ್ತು ಮುಸ್ಲಿಮರನ್ನು ಹಿಂದೂಗಳ ವೈರಿಗಳಾಗಿ ಬಿಂಬಿಸುತ್ತಾ ಹೋದರೆ ಜನರು ಅಸ್ತಿತ್ವ ಭಯಕ್ಕೆ ಒಳಗಾಗುತ್ತಾರೆ ಮತ್ತು ತಮ್ಮ ಅಣತಿಯಂತೆ ನಡಕೊಳ್ಳುತ್ತಾರೆ ಎಂಬುದನ್ನು ಈ ವರ್ಗ ತಿಳಿದುಕೊಂಡಿದೆ. ಈ ಕಾರಣದಿಂದಲೇ ಇದೀಗ ಈ ವರ್ಗ ಎಐ ತಂತ್ರಜ್ಞಾನದ ಮೊರೆ ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ ತನಗಿರುವ ಹಿಡಿತವನ್ನು ಬಳಸಿಕೊಂಡು ಮುಸ್ಲಿಮ್ ದ್ವೇಷ ಪ್ರಚಾರಕ್ಕೆ ಇಳಿದಿದೆ. ಸೆಂಟರ್ ಫಾರ್ ದಿ ಸ್ಟಡಿ ಆಫ್ ಅನ್‌ಲೈನ್ ಹೇಟ್ ಸಂಸ್ಥೆಯು ಬಿಡುಗಡೆಗೊಳಿಸಿದ ವರದಿಯು ಈ ಸತ್ಯವನ್ನೇ ಹೇಳುತ್ತದೆ.



