ರಾಂಚಿ: ಮನುಷ್ಯನ ಮನಸ್ಥಿತಿ ಯಾವ ಲೆವೆಲ್‌ಗೆ ಬದಲಾಗಿದೆ ಅಂದರೆ ಎಲ್ಲದಕ್ಕೂ ಕೊಲೆ ಪರಿಹಾರ ಅಂದುಕೊ0ಡಿದ್ದಾನೆ. ಇಲ್ಲೊಬ್ಬ ಸಸ್ಯಹಾರಿ ಗ್ರಾಹಕ ತನಗೆ ಮಾಂಸಾಹಾರಿ ಬಿರಿಯಾನಿ ಬಡಿಸಿದ್ದಕ್ಕೆ ಹೋಟೆಲ್ ಮಾಲೀಕನನ್ನೇ ಕೊಂದಿದ್ದಾನೆ.

ಹೌದು, 47 ವರ್ಷದ ಹೋಟೆಲ್ ಮಾಲೀಕ ವಿಜಯ್ ಕುಮಾರ್‌ನನ್ನು ಸಸ್ಯಾಹಾರಿ ಗ್ರಾಹಕನೊಬ್ಬನ ಜೊತೆ ಆಗಮಿಸಿದವನೊಬ್ಬ ಗುಂಡಿಕ್ಕಿ ಕೊಂದ ಘಟನೆ ರಾಂಚಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಶನಿವಾರ ರಾತ್ರಿ 11:30ರ ಸುಮಾರಿಗೆ ಕಾಂಕೆ-ಪಿಥೋರಿಯಾ ರಸ್ತೆಯಲ್ಲಿರುವ ಹೋಟೆಲ್‌ನಿಂದ ಸಸ್ಯಾಹಾರಿ ಬಿರಿಯಾನಿ ಖರೀದಿಸಿದ ಗ್ರಾಹಕನೊಬ್ಬ ಪಾರ್ಸೆಲ್ ತೆಗೆದುಕೊಂಡು ಹೊರಟು ಹೋದನು. ಆದರೆ ಸ್ವಲ್ಪ ಸಮಯದ ನಂತರ ಇತರ ಕೆಲವರೊಂದಿಗೆ ಹಿಂತಿರುಗಿದ ಆತ ತನಗೆ ವೆಜ್ ಬಿರಿಯಾನಿ ಬದಲು ನಾನ್ ವೆಜ್ ಬಿರಿಯಾನಿ ನೀಡಲಾಗಿದೆ ಎಂದು ದೂರಿದ್ದಾನೆ.
ಈ ವೇಳೆ ರೆಸ್ಟೋರೆಂಟ್ ಮಾಲೀಕ ಟೇಬಲೊಂದರಲ್ಲಿ ಊಟ ಮಾಡುತ್ತಿದ್ದು, ದಾಳಿಕೋರರಲ್ಲಿ ಒಬ್ಬ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ಅವರ ಎದೆಗೆ ತಗುಲಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪುಷ್ಕರ್ ತಿಳಿಸಿದ್ದಾರೆ.
ಮೃತದೇಹವನ್ನು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


