ಕೊಣಾಜೆ : ಕಲಾವಿದ ಆಯಾ ಕ್ಷೇತ್ರದ ಸೂಕ್ಷ್ಮತೆಗಳನ್ನು ಅರ್ಥೈಸುವುದರೊಂದಿಗೆ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಕಲಾವಿದನಿಗೆ ಪ್ರಶಸ್ತಿಗಿಂತ ಕಲಾ ಸಾಧನೆಯೇ ಮೌಲಿಕವಾದುದು ಎಂದು ಹಿರಿಯ ಕಲಾವಿದರಾದ ರಮೇಶ್ ರಾವ್ ಅವರು ಹೇಳಿದರು.


ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎನ್. ಜಿ. ಪಾವಂಜೆ ಲಲಿತಕಲಾ ಪೀಠ ಇದರ ವತಿಯಿಂದ ಕರಾವಳಿ ಚಿತ್ರಕಲಾ ಚಾವಡಿ (ರಿ) ಮಂಗಳೂರು ಇವರ ಸಹಕಾರದೊಂದಿಗೆ ಎರಡು ದಿನಗಳ ಕಾಲ ನಡೆದ “ಕಲಾದರ್ಪಣ” ಭಾವಚಿತ್ರ ರಚನೆ ಮತ್ತು ಸೃಜನಾತ್ಮಕ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮಂಗಳೂರು ವಿವಿಯ ಹಣಕಾಸು ಅಧಿಕಾರಿ ಪಂಚಲಿಂಗೇಶ್ವರ ಸ್ವಾಮಿ, ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಲೆಯು ಕೈಯಿಂದ ಮಾತ್ರವಲ್ಲ ಹೃದಯದಿಂದ ಹುಟ್ಟಬೇಕು. ಎರಡು ದಿನದ ಶಿಬಿರದಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ ಎಂದರು.
ಗೌರವಾಧ್ಯಕ್ಷರಾದ ಗಣೇಶ್ ಸೋಮಯಾಜಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಶಿಬಿರಲ್ಲಿ ರಾಷ್ಟ್ರಮಟ್ಟದ ಕಲಾವಿದರು ಸೇರಿದಂತೆ ನಾಡಿನ ಖ್ಯಾತ ಕಲಾವಿದರು ಭಾಗವಹಿಸುವ ಮೂಲಕ ಶಿಬಿರದ ಮೆರುಗನ್ನು ಹೆಚ್ಚಿಸಿದೆ. ವಿವಿಯಲ್ಲಿ ಪಾವಂಜೆ ಪೀಠದಲ್ಲಿ ಕಲಾಚಟುವಟಿಕೆಗೆ ಪೂರಕವಾಗಿ ಆರ್ಟ್ ಗ್ಯಾಲರಿ ನಿರ್ಮಾಣವಾಗಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಭಾಗವಹಿಸಿ ಮಾತನಾಡಿದರು. ಕರಾವಳಿ ಚಿತ್ರಕಲಾ ಚಾವಡಿಯ ಶರತ್ ಹೊಳ್ಳ ಅವರು ಸ್ವಾಗತಿಸಿದರು. ಎನ್ ಜೆ ಪಾವಂಜೆ ಲಲಿತಕಲಾ ಪೀಠದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ವಂದಿಸಿದರು. ಕರಾವಳಿ ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಡಾ.ಎಸ್.ಎಂ.ಶಿವಪ್ರಕಾಶ್ ನಿರೂಪಿಸಿದರು.
ಕಲಾವಿದರಾದ ಗಿಲಿಯಾಲ ಜಯರಾಮ್ ಭಟ್, ಜಯಶ್ರೀ ಶರ್ಮ ಹಾಗೂ ಶಿಬಿರಾರ್ಥಿ ರಾಜಶ್ರೀ ರೈ ಪೆರ್ಲ ಅವರು ಶಿಬಿರದಲ್ಲಿ ಭಾಗವಹಿಸಿದ ಅನುಭವಗಳನ್ನು ಹಂಚಿಕೊಂಡರು.
ಶೀಘ್ರದಲ್ಲೇ ಮಂಗಳ ಬಯಲು ರಂಗವೇದಿಕೆ
ಪಾವಂಜೆ ಪೀಠದ ವತಿಯಿಂದ ನಡೆದ ಕಲಾಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ಕಾರ್ಯಕ್ರಮ ನಡೆದ ಈ ಆವರಣ ಕಲಾವಿದರು ಸೇರಿದಂತೆ ಎಲ್ಲರನ್ನೂ ಆಕರ್ಷಿಸಿದೆ. ಆದ್ದರಿಂದ ಶಿಬಿರ ನಡೆದ ಈ ಜಾಗವನ್ನು ಮುಂದೆ ವಿವಿಯ ಎಲ್ಲಾ ಕಲಾ ಚಟುವಟಿಕೆಗಳಿಗೆ ಪೂರಕವಾಗಿ ನಿರ್ಮಿಸಿ ‘ಮಂಗಳ ಬಯಲು ರಂಗವೇದಿಕೆ’ ಯನ್ನಾಗಿ ರೂಪಿಸಲಾಗುವುದು.
ಪ್ರೊ.ಪಿ.ಎಲ್.ಧರ್ಮ
ಕುಲಪತಿಗಳು



