ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ನಾಟೆಕಲ್: ರಿಕ್ಷಾ ಚಾಲಕನನ್ನು ಕಲ್ಲಿನಿಂದ ಜಜ್ಜಿ, ಮರದ ಸೋಂಟೆಯಿಂದ ಬಡಿದು ಕೊಲೆಗೈದಿರುವ ಘಟನೆ ನಾಟೆಕಲ್ ಸಮೀಪದ ಮಾಂಗಟ್ಟೆ ಎಂಬಲ್ಲಿ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.
ಅಳೇಕಲ ನಿವಾಸಿ ಹಿದಾಯತ್ (35) ಕೊಲೆಗೀಡಾದ ರಿಕ್ಷಾ ಚಾಲಕ. ಶುಕ್ರವಾರ ರಾತ್ರಿ 8 ರ ಸುಮಾರಿಗೆ ಪತ್ನಿಗೆ ಕರೆ ಮಾಡಿದವರು ಬಾಡಿಗೆ ಇರುವುದಾಗಿ ತಿಳಿಸಿದ್ದರು. ರಾತ್ರಿ ಅಡುಗೆ ಮಾಡಬೇಡ ಬರುವಾಗ ತರುತ್ತೇನೆ ಅಂದು ಹೇಳಿದ್ದರು. ತಡರಾತ್ರಿವರೆಗೂ ಪತ್ನಿ ಕಾದರೂ ಹಿದಾಯತ್ ಮಾತ್ರ ಬಂದಿರಲಿಲ್ಲ. ಇಂದು ಬೆಳಿಗ್ಗೆ ಕೂಡಾ ಮನೆಗೆ ಬಾರದೇ ಇರುವುದರಿಂದ ಹಿದಾಯತ್ ಸಹೋದರ ಹನೀಫ್ ಅವರಿಗೆ ವಿಷಯ ತಿಳಿಸಿದ್ದರು. ಅವರು ಇನ್ನೋರ್ವ ಸಹೋದರ ಮಹಮ್ಮದ್ ರಫೀಕ್ ಅವರ ಜತೆಗೆ ಸೇರಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಜೀವ ಬೆದರಿಕೆಯಿತ್ತು :
ಎರಡು ದಿನಗಳ ಹಿಂದೆ ಹಿದಾಯತ್ಗೆ ಅಳೇಕಲ ನಿವಾಸಿ ಫಾರುಕ್ ಎಂಬಾತ ಜೀವಬೆದರಿಕೆ ಒಡ್ಡಿದ್ದ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಹಿದಾಯತ್ ಶುಕ್ರವಾರ ಮಧ್ಯಾಹ್ನ ವೇಳೆ ಮೌಖಿಕವಾಗಿ ದೂರು ಸಲ್ಲಿಸಿದ್ದರು. ಇಂದು ಮಧ್ಯಾಹ್ನ ವೇಳೆ ಉಳ್ಳಾಲ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದು, ಆದರೆ ಈ ವೇಳೆ ಹಿದಾಯತ್ ಕೊಲೆಯಾಗಿ ಪತ್ತೆಯಾಗಿದ್ದಾನೆ. ಹಿದಾಯತ್ನ ವಿರುದ್ಧವೂ ಉಳ್ಳಾಲ ಠಾಣೆಯಲ್ಲಿ ಹಲವು ಸಣ್ಣ ಪ್ರಕರಣ ಗಳು ಇವೆ.




















