ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಪ್ರಪಂಚದಲ್ಲಿ ನಡೆಯುವ ಎಲ್ಲಾ ವಿಚಾರಗಳ ಮಾಹಿತಿಯನ್ನು ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು, ವಿದ್ಯಾರ್ಥಿಗಳು, ಮನೆ ಒಡತಿಯರು ಪಡೆಯುವಂತಾಗಬೇಕು ಅನ್ನುವ ದೃಷ್ಟಿಯಿಂದ ಹೋಪ್ ಫೌಂಡೇಶನ್ ಉಚಿತ ಡಿಜಿಟಲ್ ಸಾಕ್ಷರತಾ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ಇನ್ಫೋಸಿಸ್ ಬಿಪಿಓ ಇದರ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ರಾಘವೇಂದ್ರ.ಕೆ ಹೇಳಿದ್ದಾರೆ.
ಇನ್ಫೋಸಿಸ್ ಸಂಸ್ಥೆಯ ಆಶ್ರಯದಲ್ಲಿ ಹೋಪ್ ಫೌಂಡೇಶನ್ , ನಾಸ್ಕಾಂ ಫೌಂಡೇಶನ್ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಜಯಂತಿ ಕಾಂಪ್ಲೆಕ್ಸ್ ನಲ್ಲಿ ನ್ಯಾಷನಲ್ ಡಿಜಿಟಲ್ ಲಿಟರಸಿ ಮಿಷನ್ (ಎನ್‍ಡಿಎಲ್‍ಎಂ)ನ ಮೂರನೇ ಸೆಂಟರ್ (ಉಚಿತ ಕಂಪ್ಯೂಟರ್ ಶಿಕ್ಷಣ ) ತರಬೇತಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.
ಇನ್ಫೋಸಿಸ್ ಸಂಸ್ಥೆಯ ಆಶ್ರಯದಲ್ಲಿರುವ ಹೋಪ್ ಸಂಸ್ಥೆ ಈಗಾಗಲೇ ಕೋಲಾರ, ಪೂನಾ ಸೇರಿ ಎರಡು ಡಿಜಿಟಲೀಕರಣ ಸಾಕ್ಷರತೆಗಾಗಿ ಸೆಂಟರ್ ಗಳನ್ನು ತೆರೆದಿದ್ದು, ಇದು ಮೂರನೇಯದ್ದಾಗಿದೆ. ಕಾರ್ಮಿಕರು, ಚಾಲಕರು, ಮನೆಯಲ್ಲಿರುವ ಮಹಿಳೆಯರು, ವಿದ್ಯಾರ್ಥಿಗಳು ಎಲ್ಲರೂ ಸೆಂಟರಿನಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ ಪಡೆಯಬಹುದಾಗಿದೆ. ವ್ಯಕ್ತಿತ್ವ ವಿಕಸನ, ಗ್ರಾಮೀಣ ಭಾಗದ ಮಕ್ಕಳಿಗೆ ಖಾಸಗಿ ಕಂಪೆನಿಗಳ ಸಂದರ್ಶನಗಳನ್ನು ಎದುರಿಸುವ ಬಗೆ, ಕಾಲೇಜು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನಗಳಲ್ಲಿ ಭಾಗವಹಿಸುವ ಬಗೆಗಿನ ತರಬೇತಿಗಳನ್ನು ಈವರೆಗೆ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ನೀಡಲಾಗಿದೆ. ಕಾಲೇಜು ಉಪನ್ಯಾಸಕರಿಗೂ ವಿದ್ಯಾರ್ಥಿಗಳು ವೃತ್ತಿ ಜೀವನಕ್ಕೆ ಹೋಗಲು ಉಪಯುಕ್ತವಾಗುವ ವಿಚಾರಗಳನ್ನು ಕಲಿಸಲು ತರಬೇತಿಯನ್ನು ನೀಡುತ್ತಿದೆ. ಈ ಮೂಲಕ ಹೋಪ್ ಸಂಸ್ಥೆಯ ಕಾರ್ಯವೈಖರಿಯಿಂದ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ನಗರಸಭೆ ಅಧ್ಯಕ್ಷೆ ಗಿರಿಜಾ ಬಾೈ ಮಾತನಾಡಿ ಹೋಪ್ ಸಂಸ್ಥೆ ಕೆಲಸವಿಲ್ಲದವರಿಗೆ ಬದುಕು ಸಾಗಿಸಲು ದಾರಿದೀಪವಾಗಲಿದೆ. ತೊಕ್ಕೊಟ್ಟು ಭಾಗದವರು ಮಾತ್ರವಲ್ಲದೆ ಕೊಣಾಜೆ, ತಲಪಾಡಿ, ಕೋಟೆಕಾರು ಭಾಗದವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ವಿದ್ಯೆ ಜತೆಗೆ ಬುದ್ಧಿಶಕ್ತಿಯನ್ನು ಬೆಳೆಸುವಂತಹ ಕಾರ್ಯವನ್ನು ಕೈಗೊಂಡಿರುವ ಹೋಪ್ ಸಂಸೆ ಧರ್ಮಾರ್ಥವಾಗಿ ವಿದ್ಯೆಯನ್ನು ಕಲಿಸಿಕೊಡುವುದನ್ನು ಎಲ್ಲರೂ ಸದುಪಯೋಗಪಡಿಸಬೇಕು ಎಂದು ಮುಖ್ಯ ಅತಿಥಿಯಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಹೇಳಿದರು.
ಈ ಸಂದರ್ಭ ನಾಸ್ಕಾಂ ಫೌಂಡೇಶನ್ನಿನ ಸಿಇಒ ಶ್ರೀಕಾಂತ್ ಸಿನ್ಹಾ, ಹೋಪ್ ಫೌಂಡೇಶನ್ನಿನ ಆಡಳಿತಾಧಿಕಾರಿ ಜಾನ್ಸನ್ ಆರೋಕಿಯಾನಾಥನ್, ಉಳ್ಳಾಲ ನಗರಸಭೆ ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಮುಕ್ಕಚ್ಚೇರಿ, ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.


