
ಹರೇಕಳ: ತುಂಬೆ ಸಮೀಪ ಸ್ವಿಫ್ಟ್ ಕಾರು ಡಿವೈಡರಿಗೆ ಬಡಿದು ಹರೇಕಳ ದೆಬ್ಬೇಲಿ ನಿವಾಸಿ ರಝಾಕ್ ಎಂಬವರ ಪುತ್ರ ನೌಫಾಲ್ (32) ಸಾವನ್ನಪ್ಪಿದ್ದು, ಮೃತ ನೌಫಾಲ್ ಹರೇಕಳ ಶ್ರೀರಾಮಕೃಷ್ಣ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದು, ಉತ್ತಮ ವಾಲಿಬಾಲ್ ಆಟಗಾರನೂ ಆಗಿದ್ದರು.
ಸಿವಿಲ್ ಇಂಜಿನಿಯರ್ ಪದವೀಧರನಾಗಿದ್ದ ಹರೇಕಳ ದೆಬ್ಬೇಲಿ ನಿವಾಸಿ ನೌಫಾಲ್ ಊರಿನಲ್ಲಿ ಸಿವಿಲ್ ಇಂಜಿನಿಯರ್ ವೃತ್ತಿಯನ್ನೇ ನಿರ್ವಹಿಸಿಕೊಂಡು ಬಂದಿದ್ದರು. ಸ್ವಿಫ್ಟ್ ಕಾರನ್ನು ಮಾರಾಟಕ್ಕಾಗಿ ಲೋನ್ ಕ್ಲಿಯರೆನ್ಸ್ ನಡೆಸಿಕೊಂಡು ಬಿ.ಸಿ.ರೋಡಿನಿಂದ ಹರೇಕಳದ ತನ್ನ ಮನೆಗೆ ವಾಪಸ್ಸಾಗುವ ಸಂದರ್ಭ ಕಾರು ಡಿವೈಡರ್ ಗೆ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ನೌಫಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹರೇಕಳ ಶಾಲೆಯ ಹೆಮ್ಮೆಯ ವಿದ್ಯಾರ್ಥಿಯಾಗಿದ್ದ ನೌಫಾಲ್, ಉತ್ತಮ ವಾಲಿಬಾಲ್ ಆಟಗಾರನಾಗಿದ್ದು, ರಾಜ್ಯಮಟ್ಟದ ತಂಡವನ್ನು ಪ್ರತಿನಿಧಿಸಿದ್ದರು. ಮೃತರ ಅಂತ್ಯಕ್ರಿಯೆ ರಾಥ್ರಿ 10ರ ಸಮಯ ಆಲಡ್ಕದ ಬದ್ರಿಯಾ ಜುಮಾ ಮಸೀದಿಯಲ್ಲಿ ಜರಗಲಿದೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರಿಯರು ಹಾಗೂ ಸಹೋದರನನ್ನು ಅಗಲಿದ್ದಾರೆ. ಮೃತರಿಗೆ ವಿಧಾನಸಭಾ ಸ್ಪೀಕರ್, ತಾ.ಪಂ ಮಾಜಿ ಸದಸ್ಯ ಮುಸ್ತಾಫ ಮಲಾರ್, ಹರೇಕಳ ಗ್ರಾ.ಪಂ ಮಾಜಿ ಅಧ್ಯಕ್ಷ ಬದ್ರುದ್ದೀನ್, ಮುಖಂಡರುಗಳಾದ ಝಕರಿಯಾ ಮಲಾರ್ ಸೇರಿದಂತೆ ಹಲವಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

