ಉಳ್ಳಾಲ : ಕುಡಿತದ ನಶೆಯಲ್ಲಿ ಮನೆಯ ಷೋಕೇಸ್ ಗಾಜು ಕೈಯ್ಯಲ್ಲೇ ಹೊಡೆದು ಒಡೆದ ಪರಿಣಾಮ ವಿವಾಹಿತನೋರ್ವ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿರುವ ಘಟನೆ ಮಾಡೂರು ಸೈಟ್ ನಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.


ಮಾಡೂರ್ ಸೈಟ್ ನಿವಾಸಿ ಸತೀಶ್ ನಾಯಕ್ ಎಂಬವರ ಪುತ್ರ ನಿತೇಶ್ ನಾಯಕ್ (38) ಸಾವನ್ನಪ್ಪಿದವರು. ಕೋಟೆಕಾರು ಬೀರಿ ಜಂಕ್ಷನ್ ಸಮೀಪವೇ ತಂದೆ, ಸಹೋದರನ ಜೊತೆಗೆ ಗಲಾಟೆ ನಡೆಸುತ್ತಾ ಬಂದಿದ್ದ ನಿತೇಶ್, ಮನೆಯಲ್ಲಿಯೂ ಸಹ ನಿತ್ಯದಂತೆ ಗಲಾಟೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಈ ವೇಳೆ ಆಕ್ರೋಶದಿಂದ ಮನೆಯೊಳಗಿರುವ ಷೋಕೇಸ್ ಗಾಜನ್ನು ಒಡೆದಿದ್ದರಿಂದಾಗಿ, ಷೋಕೇಸ್ ಗಾಜು ಒಡೆದು ಕೈ ಪ್ರಮುಖ ನರಕ್ಕೆ ತಗಲಿ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ. ನಿತೇಶ್, ಸಹೋದರ ಇಬ್ಬರೂ ತಿಂಡಿ ಲೈನ್ ಸೇಲ್ ನಡೆಸುತ್ತಿದ್ದರು. ನಿನ್ನೆಯೂ ಕರ್ತವ್ಯ ಮುಗಿಸಿ ಮನೆಗೆ ವಾಪಾಸ್ಸಾದ ಬಳಿಕ ಗಲಾಟೆ ನಡೆಸಿದ್ದರು.
ವಿವಾಹಿತರಾಗಿದ್ದ ಅವರು ಪತ್ನಿ ಜೊತೆಗೆ ವಿಚ್ಛೇದನ ಹೊಂದಿದ್ದರು.
ಮೃತರ ತಾಯಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
