ಉಳ್ಳಾಲ : ಮನುಷ್ಯನ ಅಂತಃಕರಣ ಶುದ್ಧವಾದರೆ ಬಾಹ್ಯವೂ ಶುದ್ದವಾಗುತ್ತದೆ. ಈ ಸ್ಪರ್ಧೆಯಲ್ಲಿ ಕೆಲವು ತಂಡ ಗೆದ್ದರೆ ಯಾರಿಗೂ ಸೋಲಿಲ್ಲ ಯಾಕೆಂದರೆ ಇಲ್ಲಿ ಭಜನೆ ಸಂಕೀರ್ತನೆ ಇರುವುದರಿಂದ ನೀವೆಲ್ಲರೂ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೀರಿ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು.




ಅವರು ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ಆಶ್ರಯದಲ್ಲಿ ತೊಕ್ಕೊಟ್ಟು ಅಂಬಿಕಾರಸ್ತೆಯ ಗಟ್ಟಿಸಮಾಜಭವನದಲ್ಲಿ ರವಿವಾರ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯನ್ನೊಳಗೊಂಡ ಎರಡನೇ ವರ್ಷದ ಸುಗಿತ್ ನಲಿಪುಗ 18 ವರ್ಷದ ಒಳಗಿನ ವಯೋಮಾನದವರ ಕುಣಿತ ಭಜನಾ ಸ್ಪರ್ಧೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಸಮಾಜ ಸೇವೆಯೊಂದಿಗೆ ಸಂಸ್ಕೃತಿ, ಸಂಸ್ಕಾರ ಭಕ್ತಿಯ ಕಾರ್ಯ ನಡೆಸುವುದರೊಂದಿಗೆ ಕುಣಿತ ಭಜನಾ ಸ್ಪರ್ಧೆಯನ್ನು ಆಯೋಜಿ ಸುತ್ತಿರುವ ಪರಿವಾರ ಇಂದು ಸಹಾಯ ಪರಿವಾರವಾಗಿ ಸಮಾಜದಲ್ಲಿ ಮೇಲ್ಪಂಕ್ತಿಯ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಿ ಇತರ ಸಂಘ- ಸಂಸ್ಥೆಗಳಿಗೆ ಮಾದರಿಯಾಗಿ ಸಮಾಜದ ಉನ್ನತ ಸ್ಥರದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದರು.
ಜ್ಯೋತಿಷಿ ಗೋಪಾಲಕೃಷ್ಣ ಮಾತನಾಡಿ, ಕಲಿಯುಗದಲ್ಲಿ ದಾನಧರ್ಮಗಳು ಪುಣ್ಯದ ಕಾರ್ಯಗಳಾಗಿದ್ದು ಪ್ರಸ್ತುತ ದಿನಗಳಲ್ಲಿ ವಿದೇಶಿಯರೂ ಭಾರತೀಯ ಸಂಸ್ಕೃತಿಗೆ ಮಾರುಹೋಗಿ ಭಾರತೀಯ ಹೆಣ್ಣುಮಕ್ಕಳನ್ನು ವಿವಾಹವಾಗುತ್ತಿದ್ದು ಭಜನೆ ಹಾಡುತ್ತಿದ್ದಾರೆ. ಆದರೆ ನಮ್ಮವರು ವಿದೇಶೀ ಸಂಸ್ಕೃತಿಗೆ ಮಾರುಹೋಗಿ ಮದುವೆ ಕಾರ್ಯಕ್ರಮ ವಿರೂಪಗೊಳಿಸುತ್ತಿದ್ದಾರೆ ಎಂದರು.
ಶ್ರೀ ಸಾಯಿಪರಿವಾರ್ ಟ್ರಸ್ಟ್‌ನ ಗೌರವಾಧ್ಯಕ್ಷ ಮಸ್ಕತ್‌ನ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನ ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತಸರ ಸುರೇಶ್ ಭಟ್ನಗರ, ಮೈಸೂರು ಇಲೆಕ್ಟ್ರಿಕಲ್ಸ್ ಎಂಡ್ ಪ್ರೈ.ಲಿ.ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಉದ್ಯಮಿಗಳಾದ ಲಾಂಚು ಲಾಲ್, ಪ್ರಕಾಶ್, ಗೀತೇಶ್ ಕುತ್ತಾರು, ಗಣೇಶ್ ಅಂಚನ್, ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂನ ಉಡುಪಿ ಜಿಲ್ಲಾಧ್ಯಕ್ಷ ದಿವಾಕರ್ ಶೆಟ್ಟಿ ಕಾಪು, ಸಾಯಿ ಪರಿವಾರ್ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಪುರುಷೋತ್ತಮ ಕಲ್ಲಾಪು, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿಯ ಜಿಲ್ಲೆಯ ಒಟ್ಟು 32 ತಂಡಗಳು ಕುಣಿತ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.
ಶ್ರೀ ಸಾಯಿ ಪರಿವಾರ್ ಟ್ರಸ್ಟ್‌ನ ಸಲಹೆಗಾರ ಡಾ। ಅರುಣ್ ಉಳ್ಳಾಲ್ ಸ್ವಾಗತಿಸಿದರು. ಸ್ಥಾಪಕ ಟ್ರಸ್ಟಿ ಪ್ರವೀಣ್ ಎಸ್. ಕುಂಪಲ ನಿರೂಪಿಸಿದರು. ಸದಸ್ಯರ ಕೃಷ್ಣಪೊನ್ನತ್ತೋಡು ವಂದಿಸಿದರು.




