
ಉಳ್ಳಾಲ: ಜೂ.28 ರಂದು ಇನ್ಸ್ಟಾಗ್ರಾಮ್ ನಲ್ಲಿ ಅಪ್ರಾಪ್ತೆಯ ಪರಿಚಯ ಮಾಡಿಕೊಂಡ ಯುವಕನೋರ್ವ ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಸೋಮೇಶ್ವರ ಸಮುದ್ರ ತೀರದಲ್ಲಿ ಕಾರೊಳಗಡೆಯೇ ಅತ್ಯಾಚಾರವೆಸಗಿರುವ ಘಟನೆ ಶುಕ್ರವಾರ ಸಂಜೆ ಬೆಳಕಿಗೆ ಬಂದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಂತೆ ಆರೋಪಿ ಅಡ್ಯಾರ್ ವಳಚ್ಚಿಲ್ ನಿವಾಸಿ ಕೆಲ್ವಿನ್ (೨೪) ಎಂಬಾತನನ್ನು ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ತನ್ನ ಪಿಯುಸಿ ಮುಗಿಸಿ ನರ್ಸಿಂಗ್ ಶಿಕ್ಷಣಕ್ಕೆ ಕಾಯುತ್ತಿದ್ದ ಅಪ್ರಾಪ್ತೆಯನ್ನು ಕೆಲ್ವಿನ್ ಇನ್ಸ್ಟಾಗ್ರಾಮ್ ಮೂಲಕ ಪರಿಚಯಿಸಿಕೊಂಡಿದ್ದನು. ಪರಿಚಯ ಮಾಡಿದ ನಾಲ್ಕನೇ ದಿನದಲ್ಲಿ ಭೇಟಿಯಾಗುವ ಉದ್ದೇಶ ಮಾಡಿಕೊಂಡು ಆಕೆಯ ಉಳ್ಳಾಲದ ಸ್ಥಳೀಯ ಠಾಣಾ ಸರಹದ್ದು ವ್ಯಾಪ್ತಿಯ ಮನೆಗೆ ಕಾರಿನಲ್ಲಿ ಬಂದಿದ್ದನು. ಬಳಿಕ ಅಪ್ರಾಪ್ತೆಯನ್ನು ಕರೆದೊಯ್ದು ಕುತ್ತಾರು ಸಮೀಪ ಲಾಡ್ಜ್ ವೊಂದರಲ್ಲಿ ರೂಮ್ ಕೇಳಿದ್ದಾನೆ. ಆದರೆ ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿ ರೂಮ್ ಕೊಟ್ಟಿರಲಿಲ್ಲ. ಅದಕ್ಕಾಗಿ ಕಾರಿನಲ್ಲೇ ಕೊಂಡೊಯ್ದ ಆರೋಪಿ ಸೋಮೇಶ್ವರ ಸಮುದ್ರ ತೀರದಲ್ಲಿ ಕಾರೊಳಗಡೆಯೇ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದನು. ನಂತರ ಆಕೆಯ ಮನೆಯವರೆಗೂ ಕಾರಿನಲ್ಲಿ ಬಿಟ್ಟುಹೋಗಿದ್ದಾನೆ. ಬೆಳಿಗ್ಗೆ ಮತ್ತು ಸಂಜೆ ಕಾರಿನಲ್ಲಿ ಅಪ್ರಾಪ್ತೆಯನ್ನು ಕರೆದೊಯ್ಯುವುದನ್ನು ಮನೆ ಸಮೀಪದವರು ಗಮನಿಸಿದ್ದರು. ರಾತ್ರಿ ಹೊತ್ತಲ್ಲಿ ಅಪ್ರಾಪ್ತೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಬಳಿ ಪರಿಶೀಲಿಸಿದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಅದರಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಕೆಲ್ವಿನ್ ಪೈಂಟಿಂಗ್ ವೃತ್ತಿಯನ್ನು ನಡೆಸುತ್ತಿದ್ದನು.

