ಮಂಗಳೂರು : ದ.ಕ.ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ತಡೆಯುವ ಉದ್ದೇಶದಿಂದ ಮಾದಕ ವಸ್ತುಗಳ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸುವ ಬದಲು ಜಿಲ್ಲಾಸ್ಪತ್ರೆಗಳಲ್ಲೇ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದ ಪಡೀಲ್‌ನಲ್ಲಿರುವ ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಪ್ರಜಾಸೌಧದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ದಿನನಿತ್ಯ ಹೊಸ ಹೊಸ ರೀತಿಯ ಮಾದಕ ವಸ್ತುಗಳು ಬರುತ್ತಿದೆ. ಅದನ್ನು ಬೆಂಗಳೂರಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರಬೇಕಾದ ಅನಿವಾರ್ಯತೆ ಇದೆ. ಇದು ವರದಿಯ ವಿಳಂಬಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯಲ್ಲೇ ಆಹಾರ ಮತ್ತು ಮಾದಕ ವಸ್ತುಗಳ ಪರೀಕ್ಷೆಗೆ ಚಿಂತನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾನೂನುಗಳನ್ನು ಮತ್ತಷ್ಟು ಬಿಗಿ ಮಾಡುವುದರೊಂದಿಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಹಾಗೂ ವೈದ್ಯಕೀಯ ಕಾಲೇಜು, ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯಕ್ರಮ ರೂಪಿಸಲಾಗುತ್ತದೆ. ಯುವಜನತೆ ಮಾದಕ ವ್ಯಸನದ ದಾಸರಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಗಳಲ್ಲಿ ಕೌನ್ಸೆಲಿಂಗ್ ಜತೆಗೆ ನೋಡಲ್ ವ್ಯಕ್ತಿಯನ್ನು ನೇಮಿಸಿಕೊಂಡು ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಮಸ್ಯೆ ಅಧಿಕವಿದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಮಾದಕ ದ್ರವ್ಯ. ವ್ಯಸನದ ನಿರ್ಮೂಲನೆಗೆ ಪ್ರಯತ್ನಿಸಲಾಗುವುದು ಎಂದರು.