ತೊಕ್ಕೊಟ್ಟು: ಸಹ್ಯಾದ್ರಿ ಕೋ ಓಪರೇಟಿವ್ ಸೊಸೈಟಿ ಉದ್ಘಾಟನೆಯ ಸುಸಂದರ್ಭದಲ್ಲೇ 1,100 ಸದಸ್ಯರನ್ನು ಒಳಗೊಂಡು, 40 ಲಕ್ಷ ರೂ. ಪಾಲುಬಂಡವಾಳವನ್ನಿಟ್ಟುಕೊಂಡು , ಜಿಲ್ಲೆಯಾದ್ಯಂತ ಎಲ್ಲರ ಮನಗೆದ್ದ ಕೆ.ಟಿ.ಸುವರ್ಣರಂತಹ ಅಧ್ಯಕ್ಷರನ್ನು ಇಟ್ಟುಕೊಂಡಿರುವುದರಿಂದ ಅಭಿವೃದ್ಧಿಗೆ ಪೂರಕವಾದಂತಹ ಎಲ್ಲಾ ವ್ಯವಸ್ಥೆಗಳಿದ್ದು, ಸಂಸ್ಥೆ ಜಿಲ್ಲೆಯಲ್ಲೇ ಅತಿ ದೊಡ್ಡ ಸಂಸ್ಥೆಯಾಗಿ ಬೆಳೆದು, ರಾಜ್ಯಮಟ್ಟದ ಸಹಕಾರಿ ಸಂಘವಾಗಿ ಬೆಳೆದು ನಿಲ್ಲಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿ. ಬೆಂಗಳೂರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರು ಹಾಗೂ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇಲ್ಲಿನ ನಿರ್ದೇಶಕ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು.





ಅವರು ತೊಕ್ಕೊಟ್ಟು ಭಟ್ನಗರದ ಶಕ್ತಿ ಕಾಂಪ್ಲೆಕ್ಸ್ ಮೊದಲ ಮಹಡಿಯಲ್ಲಿ ಆರಂಭಗೊಂಡ ಸಹ್ಯಾದ್ರಿ ಕೋ-ಓಪರೇಟಿವ್ ಸೊಸೈಟಿ ಲಿ. ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಹೊಸ ಸಂಸ್ಥೆಯ ಸೇರ್ಪಡೆಯಾಗಿದೆ. ವಿಶಾಲವಾದ ಕ್ಷೇತ್ರ ಸಹಕಾರಿ ಕ್ಷೇತ್ರ. ದೇಶದ 32 ಕೋಟಿ ಜನಸಂಖ್ಯೆಯ ಜನ ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ. ಬೇರೆ ಯಾವುದೇ ಕ್ಷೇತ್ರಗಳಲ್ಲಿ ಇಂತಹ ಸಂಖ್ಯೆಯಿಲ್ಲ. 120 ವರ್ಷಗಳ ಹಿಂದೆ ಸಹಕಾರಿ ಸಂಘ ಹುಟ್ಟಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಹುಟ್ಟುವ ಮುನ್ನವೇ ಸಹಕಾರಿ ಸಂಸ್ಥೆಗಳ ಉಗಮವಾಗಿದೆ. ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಹಕಾರಿ ಕ್ಷೇತ್ರದಿಂದ ಮಾತ್ರ ಸಾಧ್ಯ ಅಂದುಕೊಂಡು ಬ್ರಿಟೀಷರೇ ಚಾಲನೆ ನೀಡಿದ್ದರು. ಬಹುತೇಕ ರಾಷ್ಟ್ರೀಕೃತ ಜಿಲ್ಲೆಯಲ್ಲೇ ಆರಂಭ ಕಂಡರೂ ಇದೀಗ ವಿಲೀನಗೊಳ್ಳುತ್ತಾ ಸಂಕುಚಿತಗೊಳ್ಳುತ್ತಿದೆ. ಇದಕ್ಕೆ ಬಾಷೆ ಬಾರದ ಸಂಸ್ಕೃತಿಗಳ ತಿಳುವಳಿಕೆ ಇಲ್ಲದ ಸಿಬ್ಬಂದಿಗಳಿಂದಾಗಿ ಅವನತಿಯಲ್ಲಿ ನಿಂತಿದೆ. ಸರಕಾರ ಹಣವನ್ನು ವಾಣಿಜ್ಯ ಬ್ಯಾಂಕುಗಳಲ್ಲಿಡುತ್ತದೆ. ಆದರೆ ಸರಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಸಹಕಾರಿ ಸಂಸ್ಥೆಗಳು. ಕನಿಷ್ಠ ಒಂದು ಗ್ರಾ.ಪಂ ಕೂಡಾ ಖಾತೆಯನ್ನು ಸಹಕಾರಿ ಕ್ಷೇತ್ರದಲ್ಲಿ ಮಾಡುವುದಿಲ್ಲ, ಆದರೆ ದುಡಿಸಲು ಸಹಕಾರಿ ಕ್ಷೇತ್ರದವರೇ ಬೇಕು. ಆದರೆ ಗ್ರಾಮೀಣ ಭಾಗದ ಜನರ ನೋವಿಗೆ ಸದಾ ಸ್ಪಂಧಿಸುವ ಮೂಲಕ ಸಹಕಾರಿ ಕ್ಷೇತ್ರ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಬೆಳೆದುನಿಂತಿದ್ದು, ಇದರಲ್ಲಿ ಬಹುಪಾಲು ಮಂಗಳೂರು ಒಳಗೊಂಡಿದೆ ಎಂದರು.
ಗೌರವ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮುಟ್ಟಿದ್ದೆಲ್ಲಾ ಚಿನ್ನ ಅನ್ನುವ ವ್ಯಕ್ತಿ ರಾಜೇಂದ್ರ ಕುಮಾರ್ ಅವರಾಗಿದ್ದು, ಅವರ ಮೂಲಕ ಉದ್ಘಾಟನೆಗೊಂಡಿರುವ ಸಂಸ್ಥೆ ಉತ್ತರೋತ್ತರ ಬೆಳೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಜನರ ಭಾವನೆಗಳನ್ನು ನೋಡುವಾಗ ಡೆಪಾಸಿಟ್ ಇಡುವವರು ಜಾಸ್ತಿಯಿದ್ದಾರೆ ಹಾಗೆಯೇ ತನ್ನಂತೆ ಸಾಲ ತೆಗೆದುಕೊಳ್ಳುವವರು ಇದ್ದಾರೆ. ಠೇವಣಿದಾರ ಮತ್ತು ಸಾಲದಾರ ಇಬ್ಬರ ಕಣ್ಣಿನಲ್ಲೂ ನೀರು ಬಾರದಂತೆ ನೋಡಿಕೊಳ್ಳುವುದೇ ಸಹಕಾರಿ ಸಂಸ್ಥೆಯ ಗುಣವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಕಂಡ ಕೆ.ಟಿ ಸುವರ್ಣ ಮತ್ತು ಎ.ಜೆ ಶೇಖರ್ ಜೋಡಿ ಸಹಕಾರ ಕ್ಷೇತ್ರವನ್ನು ಯಶಸ್ಸಿನತ್ತ ಸಾಧಿಸಲಿದೆ ಎಂದರು. ಸಹಕಾರಿ ಕ್ಷೇತ್ರಗಳ ಕಾಶಿ ಜಿಲ್ಲೆಯಾಗಿದ್ದು, ಮೊಲಹಳ್ಳಿ ಶಿವರಾಯರಿಂದ ಹಿಡಿದು ರಾಜೇಂದ್ರ ಕುಮಾರ್ ವರೆಗೂ ಅದ್ಭುತವಾದ ಸಹಕಾರಿ ಚಳುವಳಿಗಳು ನಡೆಯುತ್ತಲೇ ಬಂದಿದೆ. ಪ್ರಧಾನಿ ಮೋದಿಯವರ ಕಲ್ಪನೆಯಂತೆ ಕೂಲಿ ಕಾರ್ಮಿಕನ ಕೈಯಲ್ಲೂ ಎಟಿಎಂ ಕಾರ್ಡು ಬರುವಂತೆ ಜನಧನ ಖಾತೆ ಅಭಿಯಾನ ಮಾಡಿತ್ತು. ಜನಧನ್ ಯೋಜನೆ ಜಾರಿಯಾಗುವ ಮುನ್ನವೇ ಜಿಲ್ಲೆಯಲ್ಲಿ ಶೇ.80 ಖಾತೆಗಳಿತ್ತು, ಇದಕ್ಕೆಲ್ಲಾ ಕಾರಣ ಸಹಕಾರಿ ಸಂಘ ಆಗಿದೆ. ಜನಾರ್ದನ ಪೂಜಾರಿ ಮತ್ತು ನರೇಂದ್ರ ಮೋದಿಯವರು ರಾಷ್ಟ್ರೀಕೃತ ಬ್ಯಾಂಕ್ ಹತ್ತಿರ ದೇಶದ ಜನ ಹೋಗುವಂತೆ ಮಾಡಿದವರಾಗಿದ್ದಾರೆ ಎಂದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರು ಮತ್ತು ಪ್ರಧಾನ ಅರ್ಚಕರಾಗಿರುವ ವೇದಮೂರ್ತಿ ಬ್ರಹ್ಮಶ್ರೀ ಪದ್ಮನಾಭ ಅಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಹಸನ್ಮುಖಿಯಾಗಿ ಎಲ್ಲರ ಜೊತೆಗೆ ವ್ಯವಹರಿಸುವ ಪ್ರಾಮಾಣಿಕ ವ್ಯಕ್ತಿ ಕೆ.ಟಿ.ಸುವರ್ಣರಾಗಿದ್ದಾರೆ. ಎಲ್ಲರ ಜತೆ ಸಂಪರ್ಕ ಹೊಂದಿ, ಎಲ್ಲರನ್ನೂ ಸಂಘಟಿಸುವ ಚಾಕಚಕ್ಯತೆಯಿರುವ ವ್ಯಕ್ತಿತ್ವ ಎ.ಜೆ.ಶೇಖರ್ ಅವರದ್ದಾಗಿದೆ. ಕಾರ್ತಿಕ ಮಾಸದಲ್ಲಿ ಹಚ್ಚುವ ದೀಪ ಒಂದೇ ರೀತಿಯಲ್ಲಿ ಬೆಳಗುವ ಶುಭಸಂದೇಶವನ್ನು ನೀಡಿದೆ ಎಂದರು.
ಕೆ.ಟಿ.ಸುವರ್ಣ ಮಾತನಾಡಿ, ರಾಜೇಂದ್ರ ಕುಮಾರ್ ಅವರೇ ನಮ್ಮ ಸಹಕಾರಿ ಸಂಘಕ್ಕೆ ಪ್ರೇರಣೆ. ಜಿಲ್ಲೆ-ರಾಜ್ಯದಲ್ಲಿ ಸಹಕಾರಿ ಸಂಸ್ಥೆ ಎಲ್ಲರಿಗೂ ಸಹಕಾರಿಯಾಗಿ ಎಸ್‌ಸಿಡಿಸಿಸಿ ಸಹಕಾರಿ ಸಂಸ್ಥೆ ಬೆಳೆದು ನಿಂತಿದೆ. ಲೀಲಾರಾಮ್, ಸತೀಶ್ ಪೂಜಾರಿ ಸಂಪೂರ್ಣ ನಿರ್ದೇಶನದಡಿ ರಚನೆಗೊಂಡಿರುವ ಸಂಘ 1,100 ಸದಸ್ಯರನ್ನು ಆರಂಭಿಕ ಹಂತದಲ್ಲೇ ಸಾಧಿಸಿರುವುದು ತಂಡದ ಶ್ರಮವನ್ನು ತೋರಿಸುತ್ತದೆ. ಪಾಲುಬಂಡವಾಳವಾಗಿ ರೂ.40 ಲಕ್ಷ ಆರಂಭದಲ್ಲೇ ಇಟ್ಟುಕೊಂಡಿರುವ ಪ್ರಥಮ ಸಹಕಾರಿ ಸಂಘ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸಹಕಾರವಾಗುವ ಉದ್ದೇಶದಿಂದ ಎಲ್ಲಾ ರೀತಿಗಳಲ್ಲಿ ಸಹ್ಯಾದ್ರಿ ಸಹಕಾರಿ ಸಂಘ ಕರ‍್ಯಾಚರಿಸಲಿದೆ ಎಂದರು.







ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ , ಕುದ್ರೋಳಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರಾದ ನವೀನ್ ಚಂದ್ರ ಡಿ. ಸುವರ್ಣ ಗಣಕಯಂತ್ರ ವಿಭಾಗಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್.ರಮೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಸುರೇಶ್ ಭಟ್ನಗರ, ಮಾಂಡ್ ಸೋಭಾಣ್ ಇದರ ಅಧ್ಯಕ್ಷ ಲೂಯಿಸ್ ಜೆ.ಪಿಂಟೋ ಮುಖ್ಯ ಅತಿಥಿಗಳಾಗಿದ್ದರು.
ಸಹ್ಯಾದ್ರಿ ಕೋಆಪರೇಟಿವ್ ಸೊಸೈಟಿ ಲಿ. ನ ಅಧ್ಯಕ್ಷರಾದ ಕೆ.ಟಿ.ಸುವರ್ಣ, ಉಪಾಧ್ಯಕ್ಷರಾದ ಎ.ಜೆ.ಶೇಖರ್, ನಿರ್ದೇಶಕರುಗಳಾದ ಸತೀಶ್ ಕರ್ಕೇರ, ಬಾಬು ಕಿನ್ಯ, ಬಿ.ಡಿ.ಗೋಪಾಲ್, ದಿನೇಶ್ ಕೆ.ಅತ್ತಾವರ, ಆನಂದ ಕೆ.ಅಸೈಗೋಳಿ, ಶಿವಪ್ರಸಾದ್, ಮಾಧವ ಪೂಜಾರಿ, ಯತೀಶ್ ಹೊಸಗದ್ದೆ, ದಿವ್ಯ ನವೀನ್ ಸುವರ್ಣ, ನಿಶಾ ವಿನೋದ್ ಕುಮಾರ್ ಉಪಸ್ಥಿತರಿದ್ದರು.
ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಪತ್ರಕರ್ತ ವಿದ್ಯಾಧರ್ ಶೆಟ್ಟಿ ಮತ್ತು ದಿನೇಶ್ ರಾಯಿ ನಿರೂಪಿಸಿದರು. ಆನಂದ್ ಕೆ.ಅಸೈಗೋಳಿ ವಂದಿಸಿದರು.
ಈ ಸಂದರ್ಭ ಗೌರವ ಅಭಿನಂದನೆಯನ್ನು ಸಹಕಾರ ರತ್ನ ರಾಜೇಂದ್ರ ಕುಮಾರ್ ಸೇರಿದಂತೆ ಕಟ್ಟಡದ ಮಾಲೀಕ ಸುರೇಶ್ ಭಟ್ನಗರ, ದ.ಕ ಸಹಕಾರಿ ಸಂಘಗಳ ನೌಕರರ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸತೀಶ್ ಪೂಜಾರಿ, ಎಸ್ ಸಿಡಿಸಿಸಿಯ ನಿವೃತ್ತಿ ಡಿಜಿಎಂ ಲೀಲಾರಾಮ್ ಅವರಿಗೆ ಸಲ್ಲಿಸಲಾಯಿತು.
ಇಂಜಿನಿಯರ್ ನೀಲ್ ಕಮಲ್, ಇಂಟೀರಿಯರ್ ಡಿಸೈನರ್ ಸೋಹನ್ ಕುಮಾರ್ ಹಾಗೂ ತಿಮ್ಮಪ್ಪ ಇವರನ್ನು ಅಭಿನಂದಿಸಲಾಯಿತು.
ಯಶಸ್ವೀ ಹಾದಿಯಲ್ಲಿ ಸಹ್ಯಾದ್ರಿ' ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯೇ ಆರ್ಥಿಕವಾಗಿ ಸಬಲರಾಗಿರುವವರು. ಜಿಲ್ಲೆಯ ಜನರಲ್ಲಿ ಉಳಿತಾಯ ಮನೋಭಾವ ಇರುವುದರಿಂದ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಯಶಸ್ಸಿನ ಹಾದಿಯಲ್ಲಿದೆ. ದೇಶದ ಯಾವುದೇ ಮೂಲೆಯಲ್ಲೂ ಆರ್ಥಿಕ ತೊಂದರೆಗಳಾದರೂ, ಜಿಲ್ಲೆಯ ಜನರ ಆರ್ಥಿಕ ನೀತಿಯಿಂದಾಗಿ ಸದೃಢರಾಗಿರುವರು’.
ನವೀನ್ ಚಂದ್ರ ಡಿ ಸುವರ್ಣ
ಅಧ್ಯಕ್ಷರು
ಕುದ್ರೋಳಿ ಅಖಿಲ ಭಾರತ ಬಿಲ್ಲವರ ಯೂನಿಯನ್
`ಪ್ರೇರಣೆಯೇ ರಾಜೇಂದ್ರ ಕುಮಾರ್ ‘
ಸಹಕಾರ ಮನೋಭಾವದಡಿ ಸೇವೆ ನಡೆಸಲು ಮುಂದಾಗಿರುವುದು ಶ್ಲಾಘನೀಯ. ಉಳ್ಳಾಲ ಭಾಗದಲ್ಲಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಲು ಎದುರು ನಿಂತಿರುವ ತಂಡವಾಗಿದೆ. ಸಹಕಾರಿ ಸಂಸ್ಥೆಗಳು ನಡೆಸಲು ಪ್ರೇರಣೆಯೇ ರಾಜೇಂದ್ರ ಕುಮಾರ್. ಕಷ್ಟದಲ್ಲಿರುವವರು, ಉದ್ಯಮದಲ್ಲಿ ಸೋಲನುಭವಿಸಿದವರನ್ನು ಮೇಲೆತ್ತಲು ರಾಜೇಂದ್ರ ಕುಮಾರ್ ಅವರಿಂದ ಸಾಧ್ಯ.
ಸತೀಶ್ ಕುಂಪಲ
ಅಧ್ಯಕ್ಷರು
ಜಿಲ್ಲಾ ಬಿಜೆಪಿ
ಜಿಲ್ಲೆಯಲ್ಲಿ 900 ಸಹಕಾರಿ ಸಂಘಗಳು
ಸಹಕಾರಿ ಸಂಘಗಳಲ್ಲಿ ಸದಸ್ಯರೇ ಮಾಲೀಕರಾಗಿರುತ್ತಾರೆ. ಹಾಗಾಗಿ ಸಾಲಕ್ಕಾಗಿ ಹೆಚ್ಚಿನ ದಾಖಲಾತಿಗಳ ಅವಶ್ಯಕತೆಯೂ ಇರುವುದಿಲ್ಲ. ಕರಾವಳಿ ಜಿಲ್ಲೆಗಳಲ್ಲಿ 900 ಕ್ಕೂ ಹೆಚ್ಚಿನ ಸಹಕಾರಿ ಸಂಘಗಳಿದ್ದು, ಅದರಲ್ಲಿ 120 ಕೃಷಿಪತ್ತಿನ ಮತ್ತು 32 ಶತಮಾನೋತ್ಸವ ಸಹಕಾರಿ ಸಂಘಗಳಾಗಿ ಕಾರ್ಯನಿರ್ವಹಿಸುತ್ತಿವೆ. ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಕರವಾಗಿ ಬೆಳೆದುನಿಂತಿದೆ.
ಹೆಚ್.ಎನ್.ರಮೇಶ್
ಉಪನಿರ್ದೇಶಕರು
ಜಿಲ್ಲಾ ಸಹಕಾರಿ ಸಂಘ

