
ಉಳ್ಳಾಲ: ದೇಶದಲ್ಲಿ ಮಾಧ್ಯಮ ರಂಗ ಬಲಿಷ್ಠ ಅಂಗವಾಗಿದೆ. ಪತ್ರಕರ್ತರು ಜನರ ಸಮಸ್ಯೆಗಳನ್ನು ಭಾವನೆಗಳನ್ನು ಹುಡುಕುತ್ತಾ ಸಮಾಜಕ್ಕೆ, ಆಡಳಿತ ವ್ಯವಸ್ಥೆಗೆ ಮುಟ್ಟಿಸುವಲ್ಲಿ ಬೆಳಕು ಚೆಲ್ಲುವ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಈ ನಡುವೆ ಉಳ್ಳಾಲದ ಪತ್ರಕರ್ತರ ಸಂಘ ವಿಶಿಷ್ಟವಾಗಿ ತಮ್ಮನ್ನೇ ಸೇವಾ ಚಟುವಟಿಕೆಯಲ್ಲಿ ಇತರೆ ಸೇವಾ ಸಂಸ್ಥೆಗಳ ಜೊತೆಗೆ ಭಾಗಿಯಾಗುವ ಮೂಲಕ ಮಾದರಿಯಾಗಿದೆ ಎಂದು ಸೋಮೇಶ್ವರ ಪುರಸಭೆ ಹಾಗೂ ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ಮತ್ತಡಿ ಅಭಿಪ್ರಾಯಪಟ್ಟರು.
ಅವರು ಕಾರ್ಯನಿರತ ಪತ್ರಕರ್ತರ ಸಂಘ, ಉಳ್ಳಾಲ, ಹಿದಾಯ ಫೌಂಡೇಶನ್ ಮಂಗಳೂರು, ಯು.ಆರ್ ಫೌಂಡೇಶನ್ ಮಂಗಳೂರು, ಆಧಾರ್ ಸೇವಾ ಕೇಂದ್ರ ಮಂಗಳೂರು ಇದರ ಆಶ್ರಯದಲ್ಲಿ ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಆಧಾರ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅರ್ಜಿ ಅಂದಲ್ಲಿ ಬರೀ ಪತ್ರವಲ್ಲ ಅದರಲ್ಲಿರುವ ಬರಹಗಳು ವ್ಯಕ್ತಿ, ಮನೆ ಅಥವಾ ಸಮುದಾಯದ ಭಾವನೆಗಳನ್ನು ವಿಸ್ತರಿಸುವ ವಿಚಾರವಾಗಿರುತ್ತದೆ. ಒಂದು ಪತ್ರ ಸಂವೇದನೆ ಮೂಡಿಸುವಂತಾಗಬೇಕು. ಬರಹಗಳಿಗೆ ಜೀವವಿದೆ ಅನ್ನುವ ಮನೋಭಾವ ಇರಬೇಕು. ಇಂತಹ ವಿಚಾರಗಳಿಗೆ ಹೆಚ್ಚು ಒತ್ತು ಕೊಡುವಂತೆ ತಮ್ಮ ಸಿಬ್ಬಂದಿಗೆ ಹೇಳುತ್ತಾ ಬರುತ್ತಿರುವೆ.
ಆರೋಪದ ಹಿಂದೆ ಸತ್ಯ ಇರುತ್ತದೆ. ಅದನ್ನು ತಿಳಿದುಕೊಂಡು ಪತ್ರಕರ್ತ ರು ಸಹಕರಿಸಬೇಕಿದೆ.
ಕಾನೂನು ವ್ಯಾಪ್ತಿಯಲ್ಲಿದ್ದರೂ ಮಾನವೀಯತೆಯ ದೃಷ್ಟಿಯಿಂದ ಕೆಲವು ಕಾರ್ಯಗಳು ನಡೆಸುವುದು ಅನಿವಾರ್ಯ. ಒಟ್ಟಿನಲ್ಲಿ ಸಮತಾ ಸಮಾಜದ ನಿರ್ಮಾಣವಾಗಬೇಕು.ದ್ವೇಷ , ಅಸೂಯೆ ರಹಿತ ಜೀವನವನ್ನು ಬಾಳುವಂತೆ ದಾರಿ ಎಲ್ಲರದ್ದಾಗಬೇಕು. ತನ್ನ ಹೆಸರನ್ನು ಇಟ್ಟುಕೊಂಡು ವ್ಯಂಗ್ಯವಾಡಿದ ದಿನಗಳು ತನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದರು.
ಹಿದಾಯ ಫೌಂಡೇಶನ್ ಇದರ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ , ಹಿದಾಯ ಫೌಂಡೇಶನ್ ಪತ್ರಕರ್ತರ ಸ್ನೇಹ ಸಂಬಂಧಕ್ಕೆ ತುಂಬಾ ಆಸಕ್ತಿ ಹೊಂದಿರುವ ಸಂಸ್ಥೆಯಾಗಿದೆ. ಪತ್ರಕರ್ತರ ಸಂಘ ನಡೆಸುವ ಸಮಾಜಮುಖಿ ಕಾರ್ಯಕ್ರಮದಿಂದ ಗೌರವ ಹೆಚ್ಚಾಗುತ್ತದೆ. ಪ್ರತೀ ತಾಲೂಕು, ಪ್ರತೀ ಸಂಘದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಾಗಬೇಕು. ಆಹಾರ, ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ, ನಿವೇಶನಕ್ಕೆ ಆದ್ಯತೆಯನ್ನು ನೀಡುತ್ತಾ ಫೌಂಡೇಶನ್ ಜನಸೇವೆಯನ್ನು ನಡೆಸುತ್ತಾ ಬಂದಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಟ್ಯೂಷನ್ ಕೊಟ್ಟು ಹೆಚ್ಚು ಅಂಕ ಗಳಿಸುವಂತೆ ಮಾಡಿದ ಕೀರ್ತಿಯೂ ಫೌಂಡೇಶನ್ ಮೇಲಿದೆ ಎಂದರು.
ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್ ಕೊಣಾಜೆ ಮಾತನಾಡಿ, ಆಧಾರ್ ಜೀವನಕ್ಕೆ ಆಧಾರವಾಗಿದೆ. ಅಪ್ಡೇಟ್ ಅತಿಮುಖ್ಯ, ದೇಶ- ವಿದೇಶದುದ್ದಕ್ಕೂ ಅಪ್ಡೇಠ್ ಆಗಿ ಹೋದಲ್ಲಿ ಸಮಸ್ಯೆಗಳು ಉಳಿಯುವುದಿಲ್ಲ. ಈ ನಿಟ್ಟಿನಲ್ಲಿ ಸಮಾಜಮುಖಿ ಸೇವೆಯಲ್ಲಿ ಪ್ರೆಸ್ ಕ್ಲಬ್ ಕೈಜೋಡಿಸಿದೆ ಎಂದರು.
ಹಿದಾಯ ಫೌಂಡೇಷನ್ ಯೂತ್ ವಿಂಗ್ ಉಪಾಧ್ಯಕ್ಷರಾದ ಆಶೀಖ್ ಕುಕ್ಕಾಜೆ ಮಾತನಾಡಿ,
ಆಧಾರ್ ಅಪ್ಡೇಟ್ ಸಮಸ್ಯೆ ತುಂಬಾ ಇದ್ದು, ಹಳ್ಳಿಗಳಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಈಗಾಗಲೇ ಫೌಂಡೇಷನ್ 15 ಕ್ಯಾಂಪ್ ಗಳನ್ನು ನಡೆಸುವ ಮೂಲಕ 3500 ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಮಗುವಿಗೆ 5 ವರ್ಷ ಆದಾಗ ಅಪ್ಡೇಟ್ ಅಗತ್ಯ, ಎಸ್ ಎಸ್ ಎಲ್ ಸಿ ಪಿಯುಸಿ ವಿದ್ಯಾರ್ಥಿಗಳಿಗೆ ಅಪ್ಡೇಟ್ ಅಗತ್ಯ. ಬಂಟ್ವಾಳದ ಗ್ರಾಮಾಂತರ ಭಾಗದ ಕಾಲೇಜೊಂದರ 71 ವಿದ್ಯಾರ್ಥಿಗಳ ಆಧಾರ್ ಅಪ್ಡೇಟ್ ಒಂದೇ ಸಮನೆ ಮಾಡಲಾಯಿತು. ಡಾಕ್ಯುಮೆಂಟ್ ಅಪ್ಡೇಟ್ ಆನ್ಲೈನ್ ನಲ್ಲೇ ಮಾಡಬಹುದು. ಸರಕಾರದ ಇ ಸೊತ್ತು ವೆಬ್ಸೈಟ್ ಈಗಾಗಲೇ ಸರಕಾರದ ಕಾವೇರಿ ವೆಬ್ ಗೆ ಲಿಂಕ್ ಆಗಿರುತ್ತದೆ. ಆದರೆ ಪ್ರಮುಖವಾಗಿರುವ ಬಯೋಮೆಟ್ರಿಕ್ ಅಪ್ಡೇಟ್ ಗಳನ್ನು ಆಧಾರ್ ಸೇವಾ ಕೇಂದ್ರಗಳಲ್ಲೇ ನಡೆಸಬೇಕಾಗಿದೆ. ಬಯೋಮೆಟ್ರಿಕ್ ಸಮಸ್ಯೆಯಿಂದಾಗಿ ಜಾಗದ ನೋಂದಾವಣೆ ಸಂದರ್ಭ ಗೊಂದಲಗಳಾಗುತ್ತಿವೆ. ಹಾಗಾಗಿ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯವಾಗಿ ಮಾಡಬೇಕಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿದಾಯ ಫೌಂಡೇಶನ್ ಅಧ್ಯಕ್ಷರಾದ ಹನೀಫ್ ಹಾಜಿ ಗೋಳ್ತಮಜಲು ಇವರನ್ನು ಗೌರವಿಸಲಾಯಿತು.
ಯು.ಆರ್ ಫೌಂಡೇಶನ್ ನ ಅಧ್ಯಕ್ಷ ಉಸ್ಮಾನ್ ಎ.ಎಂ , ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಕುತ್ತಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾದ ದಿನೇಶ್ ನಾಯಕ್ ತೊಕ್ಕೊಟ್ಟು, ಆರೀಫ್ ಯು.ಆರ್ , ಯು.ಆರ್ ಫೌಂಡೇಷನ್ನಿನ ಸದಸ್ಯ ಸಫ್ವಾನ್ ಯು.ಆರ್, ಆಧಾರ್ ಸೇವಾ ಕೇಂದ್ರದ ಸಿಬ್ಬಂದಿ ಚೈತ್ರಾ, ಯೋಗಿಣಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ಸ್ವಾಗತಿಸಿ ನಿರೂಪಿಸಿದರು. ಕಾರ್ಯದರ್ಶಿ ವಜ್ರ ಗುಜರನ್ ವಂದಿಸಿದರು.




