ತೊಕ್ಕೊಟ್ಟು: ಸೋಮೇಶ್ವರ ವ್ಯವಸ್ಥಾಪನಾ ಸಮಿತಿ ಸದಸ್ಯ, ಪೊಲೀಸರಿಗೆ ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಪುಡಿರೌಡಿ ನಡೆಸಿರುವ ಹಲ್ಲೆಯನ್ನು ಇಡೀ ಸಮಾಜ ವಿರೋಧಿಸಬೇಕು. ನ್ಯಾಯದ ಪರ ಊರಿನ ಮಂದಿ ಧ್ವನಿಯೆತ್ತಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ದಿನೇಶ್ ಕುಂಪಲ ಆಗ್ರಹಿಸಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅ.4 ತಡರಾತ್ರಿ ಸೋಮೇಶ್ವರ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಉಚ್ಚಿಲ್ ಮೇಲೆ ನಡೆಸಿರುವ ಹಲ್ಲೆಯನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಮಾಜಿಕವಾಗಿ ತೊಡಗಿಸಿಕೊಂಡು, ತಾಲೂಕಿನ ಸಮಸ್ತ ಜನತೆಯ ಆರಾಧ್ಯ ದೈವ ಸೋಮನಾಥನ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗೆ ನಡೆದಿರುವ ಹಲ್ಲೆಯನ್ನು ಎಲ್ಲರೂ ಖಂಡಿಸಬೇಕಿದೆ. ಉಳ್ಳಾಲ ಪೊಲೀಸ್ ಠಾಣೆ ಹಲ್ಲೆಗೊಳಗಾದ ಕಿಶೋರ್ ಅವರ ಜೊತೆ ನಿಲ್ಲಬೇಕು.ಸೋಮೇಶ್ವರ ಕಡಲ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪುಡಿರೌಡಿಯಾಗಿರುವ ಆರೋಪಿ ಸುನಿಲ್ ಪೂಜಾರಿ ಯಾನೆ ಜುಟ್ಟು ಪೂಜಾರಿ ಕೂಡಾ ಕೆಲ ದೈವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದು, ಆದರೆ ಧಾರ್ಮಿಕವಾಗಿ ತೊಡಗಿಸಿಕೊಂಡವರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದರ ವಿರುದ್ಧ ದೈವಸ್ಥಾನದ ಆಡಳಿತ ವರ್ಗವೇ ಗಮನಹರಿಸಬೇಕು. ಅಲ್ಲದೆ ತಪ್ಪಿತಸ್ಥನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಸಮುದ್ರ ಕೊರತೆಗೆ ಅಕ್ರಮ ಮರಳುಗಾರಿಕೆಯೇ ಕಾರಣವಾಗುತ್ತಿದೆ. ಅಕ್ರಮ ಮರಳುಗಾರಿಕೆಯಿಂದಾಗಿ ಇಡೀ ಕ್ಷೇತ್ರಕ್ಕೆ ಹಾನಿಗಳಾಗುತ್ತಿವೆ. ತೊಕ್ಕೊಟ್ಟು, ಕಾಪಿಕಾಡ್, ಮಂಗಳೂರು ವಿ.ವಿ ರಸ್ತೆಯಲ್ಲಿ ಕರ್ತವ್ಯ ನಿಮಿತ್ತ ತೆರಳುವ ದ್ವಿಚಕ್ರ ವಾಹನಸವಾರರನ್ನು ನಿಲ್ಲಿಸಿ ಲೂಟಿ ನಡೆಸುತ್ತಿರುವ ಸಂಚಾರಿ ಪೊಲೀಸರು, ನಾಡಿನ ಸಂಪತ್ತನ್ನೇ ಲೂಟಿ ಹೊಡೆಯುತ್ತಿರುವ ಮರಳು ಲಾರಿಗಳು ಅವರ ಕಣ್ಣಿಗೆ ಬೀಳದಿರುವುದು ಹಾಸ್ಯಾಸ್ಪದ. ಈ ಕುರಿತು ಸ್ಪೀಕರ್ ಅವರ ಗಮನವನ್ನು ಸೆಳೆದಿದ್ದು, ಅವರು ಈಗಾಗಲೇ ಎಚ್ಚರಿಕೆಯನ್ನೂ ನೀಡಿದರೂ ಮತ್ತೆ ಪೊಲೀಸರು ಉಪಟಳ ಮುಂದುವರಿಸಿದ್ದಾರೆ ಎಂದರು.
ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೀಪಕ್ ಪಿಲಾರ್ ಮಾತನಾಡಿ, ದೇವಸ್ಥಾನದ ಸಮಿತಿ ಸದಸ್ಯರಾಗಿರುವ ಕಿಶೋರ್ ಎಲ್ಲರಿಗೂ ಬೇಕಾದಂತಹ ವ್ಯಕ್ತಿ. ಅನ್ಯಾಯದ ವಿರುದ್ಧ ಧನಿ ಎತ್ತಿದಾಗ ನಡೆದಿರುವ ಹಲ್ಲೆ ಖಂಡನೀಯ. ಸೋಮೇಶ್ವರ ಸುತ್ತಮುತ್ತ ಅಕ್ರಮ ಮರಳುಗಾರಿಕೆ ಆಘಾತಕಾರಿ. ಕ್ಷೇತ್ರದ ಅಭಿವೃದ್ಧಿಗೂ ಇದು ಹಿನ್ನೆಡೆಯಾಗುತ್ತಿದೆ. ಭಕ್ತರೆಲ್ಲರೂ ಒಗ್ಗೂಡಿ ಕ್ಷೇತ್ರದ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಮಯ ಬಂದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಸುಂದರ ಚೆಂಬುಗುಡ್ಡೆ, ಮೊಗವೀರ ಸಮಾಜದ ಮುಖಂಡರಾದ ಪ್ರೇಮ್ ನಾಥ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ಸಿನ ಹಿಂದುಳಿದ ವರ್ಗದ ಕಾರ್ಯದರ್ಶಿ ರಕ್ಷಿತ್ ಪೂಜಾರಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

