ಉಳ್ಳಾಲ: ಸಣ್ಣ ಮಗುವಿಗೂ ಗೊತ್ತಿರುವ ವಿಚಾರ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಗೆ ಗೊತ್ತಿಲ್ಲ. ಸಾಮಾನ್ಯ ಜ್ಞಾನವಿಲ್ಲದ ಶಾಸಕರು ರೈಲ್ವೇ ಪ್ರಕರಣವನ್ನು ರಾಜಕೀಯವಾಗಿ ಬಳಸಲು ಮುಂದಾಗಿರುವುದು ಹಾಸ್ಯಾಸ್ಪದ. ರೈಲ್ವೇ ಇಲಾಖೆ ಹಾಗೂ ರೈಲ್ವೇ ಪೊಲೀಸರು ಕೇಂದ್ರ ಸರಕಾರದ ನಿಯಂತ್ರಣದಲ್ಲಿದ್ದರೂ, ಪ್ರಕರಣವನ್ನು ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುತ್ತಿರುವುದು ಸಮಂಜಸವಲ್ಲ ಎಂದು ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ.
ತೊಕ್ಕೊಟ್ಟುವಿನಲ್ಲಿರುವ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ತೊಕ್ಕೊಟ್ಟು ರೈಲ್ವೇ ಪ್ರಕರಣದಲ್ಲಿ ಶಾಸಕ ವೇದವ್ಯಾಸ ಕಾಮತ್ ರಾಜ್ಯ ಸರಕಾರವನ್ನು ಬೊಟ್ಟು ಮಾಡುತ್ತಿದ್ದಾರೆ. ಕೇಂದ್ರದಲ್ಲಿರುವುದು ಬಿಜೆಪಿ ನೇತೃತ್ವದ ಸರಕಾರ, ಆ ಸರಕಾರದಡಿಯಲ್ಲಿ ಬರುವ ರೈಲ್ವೇ ಇಲಾಖೆ ಹಾಗೂ ರೈಲ್ವೇ ಪೊಲೀಸರು ಪ್ರಕರಣದ ಜವಾಬ್ದಾರಿಯನ್ನು ಹೊಂದಿರುವವರು. ಮಕ್ಕಳಿಗಿರುವ ಜ್ಞಾನ ಶಾಸಕರಿಗೆ ಇಲ್ಲದಾಗಿ ಹೋಗಿದೆ. ಒಬ್ಬ ಶಾಸಕನಿಗೆ ಮಹತ್ತರ ಜವಾಬ್ದಾಯಿರುತ್ತದೆ, ಕೂಲಂಕುಷವಾಗಿ ವಿಚಾರಗಳನ್ನು ತಿಳಿದು ಮಾತನಾಡಬೇಕಿದೆ. ಶಾಸಕ ಕಾಮತ್ ಹೇಳಿಕೆಯನ್ನು ಖಂಡಿಸುವುದರ ಜೊತೆಗೆ ಪ್ರಕರಣದ ತನಿಖೆಯನ್ನು ಸಮಗ್ರವಾಗಿ ನಡೆಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸುತ್ತೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿ, ರೈಲ್ವೇ ಪ್ರಕರಣವನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ರೈಲ್ವೇ ಪೊಲೀಸರು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು. ಬಿಜೆಪಿ ಶಾಸಕ ಕಾಮತ್, ಜ್ಞಾನವಿಲ್ಲದೆ ಮಾತನಾಡುತ್ತಾರೆ . ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದರು.
ಶಾಸಕರಾದವರು ಜನರ ನೋವಿಗೆ ಸ್ಪಂಧಿಸಬೇಕೇ ಹೊರತು, ದಿಕ್ಕು ತಪ್ಪಿಸುವ ಯತ್ನ ಮಾಡಬಾರದು. ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಮೊದಲು ವ್ಯವಸ್ಥೆಯನ್ನು ಅರಿತುಕೊಳ್ಳಿ. ಸಾಧ್ಯವಾದರೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ. ಕೇಂದ್ರದ ಅಡಿಯ ರೈಲ್ವೇ ಇಲಾಖೆ ಕಲ್ಲು ಯಾರು ಇಟ್ಟಿದ್ದಾರೆ ಅನ್ನುವ ಕುರಿತು ಕೂಲಂಕುಷ ತನಿಖೆ ಮಾಡಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದರು.
ಬಿಜೆಪಿ ನಾಯಕರು ಇಟ್ಟಿರುವ ಸಾಧ್ಯತೆಗಳೂ ಇರಬಹುದು : ವಕ್ತಾರ ಅಶ್ರಫ್ ಕೆ.ಸಿ.ರೋಡ್
ತೊಕ್ಕೊಟ್ಟು ರೈಲ್ವೇ ಹಳಿಯಲ್ಲಿ ಕಲ್ಲುಗಳನ್ನು ಬಿಜೆಪಿ ನಾಯಕರು ರಾಜಕೀಯ ದುರುದ್ದೇಶದಿಂದ ಇಡುವ ಸಾಧ್ಯತೆಗಳೂ ಹೆಚ್ಚಿದೆ. ದೇಶದ ಸುರಕ್ಷತೆ ವಿಚಾರದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ರೈಲ್ವೇ ಹಳಿಗಳಲ್ಲಿ ಡೇರೆಗಳನ್ನು ಹಾಕಿ ನೆಲೆಸಿರುವ ವಲಸಿಗರ ಮಕ್ಕಳು ಕಲ್ಲುಗಳನ್ನು ಇಟ್ಟಿಡುವುದಾಗಿ ಆರ್ ಪಿಎಫ್ ತಿಳಿಸಿದೆ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೈಲ್ವೇ ಇಲಾಖೆ ಸಮಗ್ರ ತನಿಖೆಯನ್ನು ಕೈಗೆತ್ತಿಕೊಳ್ಳಬೇಕಿದೆ. ಬಿಜೆಪಿ ಆಡಳಿತದಲ್ಲಿರುವ ಉತ್ತರಭಾರತದ ರಾಜ್ಯಗಳಿಂದ ಹೆಚ್ಚಾಗಿ ವಲಸೆ ಕಾರ್ಮಿಕರು ಕರಾವಳಿಗೆ ವಲಸೆ ಬರುತ್ತಿದ್ದಾರೆ. ಬಿಜೆಪಿ ಆಡಳಿತದಡಿಯ ರಾಜ್ಯಗಳ ಜನತೆ ನಿರುದ್ಯೋಗದಿಂದ ಬಳಲುತ್ತಿರುವುದು ಇಲ್ಲಿರುವ ಡೇರೆಗಳೇ ಸಾಕ್ಷಿ. ಸೆ. ೨೧ ಗುಜರಾತ್ ಸೂರತ್ ನಲ್ಲಿ , ಕಾನ್ಪುರದಲ್ಲಿ ರೈಲ್ವೇ ಹಳಿಯಲ್ಲಿ ಸಿಲಿಂಡರ್ ಇಡುವ ಕಾರ್ಯ, ಸಾಬರ್‌ಮತಿ ಜೋದ್ ಪುರ್ ಮಾರ್ಗದಲ್ಲಿ ರೈಲ್ವೇ ಹಳಿಗಳನ್ನು ತಪ್ಪಿಸಿ ರೈಲು ಅಪಘಾತಕ್ಕೆ ಯತ್ನಿಸುತ್ತಿರುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಪಾಕಿಸ್ತಾನ ಮೂಲದ ಉಗ್ರ ಈಗಾಗಲೇ ಇಮೇಲ್ ಮುಖೇನ ರೈಲ್ವೇ ಹಳಿಗಳನ್ನು ತಪ್ಪಿಸುವ ದುಷ್ಕೃತ್ಯದ ಸಂದೇಶ ರವಾನಿಸಿರುವುದರಿಂದ, ಇಂತಹ ಪ್ರಕರಣಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಅದನ್ನು ಬಿಟ್ಟು ರಾಜಕೀಯ, ಒಂದು ಸಮುದಾಯದ ಮೇಲೆ ಎತ್ತಿಕಟ್ಟುವ ಕೆಲಸ ಮಾಡಬಾರದು. ಬಾಂಗ್ಲಾ ವಲಸಿಗರು ದೇಶದೊಳಗೆ ನುಸುಳಲು ಕೇಂದ್ರದ ವೈಫಲ್ಯವೇ ಕಾರಣವಾಗಿರುವಾಗ ತಮ್ಮ ಸರಕಾರದ ದೇಶದ ಭದ್ರತೆಯ ವಿಚಾರಗಳ ವೈಫಲ್ಯಗಳನ್ನು ಪ್ರಶ್ನಿಸುವ ಬದಲು ರಾಜ್ಯದ ಕಾಂಗ್ರೆಸ್ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸರಿಯಲ್ಲ ಎಂದರು.
ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ , ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಕೆಥೋಲಿಕ್ ಮಹಾಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ, ಕ್ಷೇತ್ರ ವಕ್ತಾರ ಅಶ್ರಫ್ ಕೆ.ಸಿ.ರೋಡ್, ಉಳ್ಳಾಲ ನಗರಸಭೆ ಮಾಜಿ ಅಧ್ಯಕ್ಷ ದಿನೇಶ್ ರೈ, ಮಹಿಳಾ ಕಾಂಗ್ರೆಸ್ ಕ್ಷೇತ್ರ ಅಧ್ಯಕ್ಷೆ ಚಂದ್ರಿಕಾ ರೈ, ಮುನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ವಿಲ್ಫೆçಡ್ ಡಿಸೋಜ, ಬ್ಲಾಕ್ ಕರ‍್ಯದರ್ಶಿ ಮನ್ಸೂರ್ ಮಂಚಿಲ ಉಪಸ್ಥಿತರಿದ್ದರು.


