ಉಳ್ಳಾಲ: ಕೋಟಾ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾದ ಹಿನ್ನೆಲೆ ತೆರವಾದ ದ.ಕ-ಉಡುಪಿ ಒಳಗೊಂಡ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಾಜ್ಯ ಬಿಜೆಪಿ ಅಂತಿಮ ನಿರ್ಧಾರಕ್ಕೆ ಬಂದಿದ್ದು, ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೆಸರು ಹೈಕಮಾಂಡ್ ಅಂಗಳ ತಲುಪಿದ್ದು, ಬಿಲ್ಲವ ಕೋಟಾದಡಿ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಪರಿಷತ್ ಸ್ಥಾನಕ್ಕಾಗಿ ಉಭಯ ಜಿಲ್ಲೆಗಳಲ್ಲಿ ಭಾರೀ ಪೈಪೋಟಿಯಿದ್ದು, ಆಕಾಂಕ್ಷೆಗಳ ಪಟ್ಟಿಯೂ ದೊಡ್ಡದಾಗಿದೆ. ಹೀಗಾಗಿ ಕಳೆದ ಬಾರಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯೇ ಮಂಗಳೂರಿಗೆ ಅಗಮಿಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಉಭಯ ಜಿಲ್ಲೆಯ ಶಾಸಕರು, ಸಂಸದರು ಹಾಗೂ ನಾಯಕರು ಸೇರಿ 62 ಮಂದಿ ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಉಡುಪಿಯ ಪ್ರಮೋದ್ ಮಧ್ವರಾಜ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೆಸರು ಭಾರೀ ಚರ್ಚೆಯಾಗಿತ್ತು. ಅದರಂತೆ ಉಭಯ ಜಿಲ್ಲೆಯ ನಾಯಕರ ಅಭಿಪ್ರಾಯದಂತೆ ಈ ಮೂರು ಹೆಸರುಗಳನ್ನು ಬೊಮ್ಮಾಯಿ ರಾಜ್ಯ ಬಿಜೆಪಿ ಗಮನಕ್ಕೆ ತಂದಿದ್ದರು. ಸದ್ಯ ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಈ ಮೂರು ಹೆಸರುಗಳು ಅಂತಿಮವಾಗಿದ್ದು, ಸದ್ಯ ಹೈಕಮಾಂಡ್ ಅಂಗಳ ತಲುಪಿದೆ.
ಸತೀಶ್ ಕುಂಪಲಗೆ ಟಿಕೆಟ್ ಸಾಧ್ಯತೆ!
ಇನ್ನು ನಳಿನ್ ಕುಮಾರ್ ಕಟೀಲ್, ಪ್ರಮೋದ್ ಮಧ್ವರಾಜ್ ಹಾಗೂ ಸತೀಶ್ ಕುಂಪಲ ಪೈಕಿ ಕುಂಪಲಗೆ ಟಿಕೆಟ್ ಫೈನಲ್ ಆಗೋದು ಬಹುತೇಕ ಪಕ್ಕಾ ಆಗಿದೆ ಎನ್ನಲಾಗಿದೆ. ಬಿಲ್ಲವ ಸಮುದಾಯದ ಕೋಟಾ ಶ್ರೀನಿವಾಸ ಪೂಜಾರಿಯಿಂದ ತೆರವಾದ ಸ್ಥಾನಕ್ಕೆ ಮತ್ತೊಬ್ಬ ಬಿಲ್ಲವ ನಾಯಕನ ಆಯ್ಕೆಗೆ ಸಮಾಜದ ಪ್ರಮುಖರು ಕೂಡ ಆಗ್ರಹ ವ್ಯಕ್ತಪಡಿಸಿದ್ದು, ಈ ಬಗ್ಗೆ ರಾಜ್ಯ ನಾಯಕರು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಉಳಿದ ಇಬ್ಬರು ರಾಜಕೀಯದಲ್ಲಿ ಅಧಿಕಾರ ಪಡೆದವರಾಗಿದ್ದು, ಸತೀಶ್ ಕುಂಪಲಗೆ ಈ ಬಾರಿ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಉಭಯ ಜಿಲ್ಲೆಗಳಲ್ಲಿ ಬಂಟ ಸಮುದಾಯದವರಿಗೆ ಹೆಚ್ಚು ಅಧಿಕಾರ ಇರೋದ್ರಿಂದ ಪ್ರಭಾವಿ ಬಿಲ್ಲವ ಸಮುದಾಯದ ನಾಯಕರಿಗೆ ಸ್ಥಾನಮಾನ ಸಿಗದೇ ಇರೋ ಬಗ್ಗೆಯೂ ಬಿಲ್ಲವ ಸಮುದಾಯದ ಪ್ರಮುಖರು ರಾಜ್ಯದ ಹಾಗೂ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಇನ್ನು ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಮಾಡದೇ ಸತೀಶ್ ಕುಂಪಲಗೆ ಟಿಕೆಟ್ ಕೊಡುವ ಬಗ್ಗೆ ನಾಯಕರು ಒಲವು ಹೊಂದಿದ್ದಾರೆ ಎನ್ನಲಾಗಿದ್ದು, ಆರ್ ಎಸ್ ಎಸ್ ಕೂಡ ಕುಂಪಲ ಪರವಾಗಿಯೇ ಒಲವು ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ. ಜಾತಿಯ ಲೆಕ್ಕಾಚಾರ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮಾಡಿದ ಕಾರ್ಯಗಳ ಕಾರಣದಿಂದ ಸತೀಶ್ ಕುಂಪಲ ಟಿಕೆಟ್ ಪಡೆಯೋದು ಬಹುತೇಕ ಅಂತಿಮ ಎನ್ನಲಾಗಿದೆ.



