ಉಳ್ಳಾಲ: ವಿಶೇಷ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಗೌರವಿಸುವ ಉಳ್ಳಾಲ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ರಾಧಾಕೃಷ್ಣ ರೈ ಉಮಿಯ ಹೇಳಿದರು.
ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ತೊಕ್ಕೊಟ್ಟಿನ ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ಶನಿವಾರದಂದು ನಡೆದ “ತಿಂಗಳ ಬೆಳಕು-ಗೌರವ ಅತಿಥಿ” ಕಾರ್ಯಕ್ರಮದ 4 ನೇ ಸರಣಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸಮಾಜದ ಅಂಕು,ಡೊಂಕುಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿ ಮಾಡಿ ತಿದ್ದುವುದರ ಜೊತೆಗೆ ಸಮಾಜ ಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿರುವ ಉಳ್ಳಾಲದ ಉತ್ಸಾಹಿ ಪತ್ರಕರ್ತರಿಂದ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.

ನೀಟ್ ಪರೀಕ್ಷೆಯಲ್ಲಿ 720ರಲ್ಲಿ 647 (28,782 ಆಲ್ ಇಂಡಿಯಾ ರ್ಯಾಂಕ್)ಅಂಕ ಗಳಿಸಿ ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಮೆರಿಟ್ ಸೀಟು ಗಿಟ್ಟಿಸಿದ ಕೊಣಾಜೆ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ತನ್ವಿ ಮುಟ್ಟಿಂಜ ಮಾತನಾಡಿ ಇಷ್ಟ ಪಟ್ಟು ಓದಿದರೆ ವಿದ್ಯೆ ಎಂದಿಗೂ ಕಷ್ಟಕರ ಅಲ್ಲ,ಓದುವ ವಾತಾವರಣ ಶಾಂತವಾಗಿರಬೇಕಷ್ಟೆ.ಓದುವ ಆಸೆ,ಛಲ ಇದ್ದರೆ ಅಂಕ ತೆಗೆಯುವುದು ಬಹಳ ಸುಲಭ.ನನ್ನ ವಿದ್ಯಾಭ್ಯಾಸಕ್ಕೆ ಅಪ್ಪ ಅಮ್ಮ ನಿರಂತರ ಪ್ರೋತ್ಸಾಹಿಸಿ ಹುರಿದುಂಬಿಸಿದ್ದಾರೆ.ಖಾಸಗಿ ಮೆಡಿಕಲ್ ಕಾಲೇಜಲ್ಲಿ ದುಬಾರಿ ಶುಲ್ಕ ಇರುವುದರಿಂದ ಮೆರಿಟ್ ಅರ್ಹತೆ ಗಳಿಸಿದರೂ ಸರಕಾರಿ ಮೆಡಿಕಲ್ ಕಾಲೇಜಲ್ಲಿ ಪ್ರವೇಶ ಪಡೆಯಬೇಕೆಂದಿದ್ದೆ.ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸೌಲಭ್ಯವಿಲ್ಲ.ದೂರದ ಊರಿಗೆ ಹೋಗಿ ನನಗೆ ಗೊತ್ತಿಲ್ಲ,ಪೋಷಕರೂ ಅದಕ್ಕೆ ಒಪ್ಪೋದಿಲ್ಲ.ಮೆರಿಟ್ ಸೀಟಿಗೆ ಖಾಸಗಿ ಕಾಲೇಜಲ್ಲಿ 1.5 ಲಕ್ಷ ಶುಲ್ಕ ಇದೆ.ಎಲ್ಲಾ ಸೇರಿ ಸುಮಾರು 2.5 ಲಕ್ಷ ರೂಪಾಯಿ ಖರ್ಚು ತಗಲುತ್ತದೆ.ಅಷ್ಟೊಂದು ದುಡ್ಡನ್ನ ಹೊಂದಿಸುವುದು ನನ್ನ ಪೋಷಕರಿಗೆ ಕಷ್ಟ ಸಾಧ್ಯವಾಗಿದ್ದು, ಸಾಲ ಮಾಡುವ ಅನಿವಾರ್ಯತೆ ಇತ್ತು.ಆದರೆ ಇದೀಗ ಮೆಡಿಕಲ್ ಕಾಲೇಜಿನ ಸಂಪೂರ್ಣ ಶುಲ್ಕವನ್ನು ಮಂಗಳೂರಿನ ಗುರು ಬೆಳದಿಂಗಳು ಟ್ರಸ್ಟ್ ನ ಮುಖ್ಯಸ್ಥರಾದ ಪದ್ಮರಾಜ್ ಅವರು ಭರಿಸುತ್ತೇನೆಂದು ಧೈರ್ಯ ತುಂಬಿದ್ದು ಬಹಳಷ್ಟು ಖುಷಿ ಕೊಟ್ಟಿದೆ.ಎಲ್ಲರ ಪ್ರೋತ್ಸಾಹ,ಆಶೀರ್ವಾದದಿಂದ ಮುಂದೆ ನಾನು ಸರ್ಜನ್ ಆಗಬೇಕಂತ ಮಹದಾಸೆ ಇಟ್ಟಿದ್ದೇನೆ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿನಿ ತನ್ವಿ ಮುಟ್ಟಿಂಜ,ಎಳೆಯ ವಯಸ್ಸಿನಲ್ಲಿ ಈಜು ಕ್ರೀಡೆಯಲ್ಲಿ ನೋಬಲ್ ವರ್ಲ್ಡ್ ರೆಕಾರ್ಡ್ ಮಾಡಿರುವ ಈಜುಪಟು ಹ್ಯಾಡ್ರಿಯನ್ ವೇಗಸ್ ,ಉದ್ಯಮಿ ರಾಧಾಕೃಷ್ಣ ರೈ ಉಮಿಯ ಅವರನ್ನು ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಸಂತ್ ಎನ್.ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷರಾದ ಆರೀಫ್ ಯು.ಆರ್ ,ಕೋಶಾಧಿಕಾರಿ ಬಶೀರ್ ಕಲ್ಕಟ್ಟ,ಕಾರ್ಯಕಾರಿ ಸಮಿತಿ ಸದಸ್ಯರಾದ ಆಸೀಫ್ ಬಬ್ಬುಕಟ್ಟೆ,ಪತ್ರಕರ್ತರಾದ ಜಯಂತ್ ಸಂಕೋಳಿಗೆ,ಗಂಗಾಧರ್ ನೀರಾರಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ದಿನೇಶ್ ನಾಯಕ್ ಸ್ವಾಗತಿಸಿದರು.ಪ್ರದಾನ ಕಾರ್ಯದರ್ಶಿ ಶಶಿಧರ ಪೊಯ್ಯತ್ತಬೈಲು ನಿರೂಪಿಸಿ,ವಂದಿಸಿದರು.ಪತ್ರಕರ್ತೆ ಸುಶ್ಮಿತಾ ಸಾಮಾನಿ ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು.
ಎಲ್ ಕೆಜಿಯಲ್ಲೇ ಈಜು ಕಲಿಯಲು ಹೋಗುತ್ತಿದ್ದೆ .ಮೊದಲು ಬೇಬಿ ಪೂಲಲ್ಲಿ ಸ್ವಿಮ್ಮಿಂಗ್ ಕಲಿಯಲು ಆರಂಭಿಸಿದ್ದೆ.ಮತ್ತೆ ಡೀಪ್ ಪೂಲಲ್ಲಿ ಸರಾಗವಾಗಿ ಈಜಲು ಕಲಿತೆ.ಈಜಿನಲ್ಲಿ ಇನ್ನಷ್ಟು ಸಾಧನೆಗೈದು ಗಿನ್ನೆಸ್ ರೆಕಾರ್ಡ್ ಮಾಡುವ ಮಹದಾಸೆ ಇದೆ.ದೈಹಿಕ ಕ್ಷಮತೆಗಾಗಿ ಮಿತ ಆಹಾರ ಸೇವನೆ ಅದರಲ್ಲೂ ಮನೆಯಲ್ಲಿ ತಯಾರಿಸಿದ ಖಾದ್ಯಗಳನ್ನೇ ಸೇವಿಸುತ್ತೇನೆ.
ಹ್ಯಾಡ್ರಿಯನ್ ವೇಗಸ್
ಪ್ರತಿಬಾನ್ವಿತ ಈಜು ಪಟು.


