ಮುಡಿಪು: ನಂಬಿಕೆಯಿಂದ ಕೆಲಸ ಮಾಡಿದ್ರೆ ದೈವ ದೇವರ ಅನುಗ್ರಹ ಖಂಡಿತಾ ಇರುತ್ತದೆ. ಕಾರಣಿಕ ಕ್ಷೇತ್ರವಾದ ಅಸೈಗೋಳಿಯ ಶ್ರೀ ಗುಳಿಗ ಕೊರಗಜ್ಜ ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯ ನಡೆಯಲಿದ್ದು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯವು ಎಲ್ಲರ ಸಹಕಾರದೊಂದಿಗೆ ನಿರ್ವಿಘ್ನವಾಗಿ ನಡೆಯುವಂತಾಗಲಿ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಕಲ್ಲಿಮಾರ್ ಅವರು ಹೇಳಿದರು.
ಅವರು ಅಸೈಗೋಳಿಯ ಶ್ರೀ ಗುಳಿಗ ಹಾಗೂ ಕೊರಗಜ್ಜ ಕ್ಷೇತ್ರದ ಜೀರ್ಣೋದ್ಧಾರ, ಪುನರ್ ಪ್ರತಿಷ್ಞೆ ಮತ್ತು ಶ್ರೀ ಗುಳಿಗ ದೈವಕ್ಕೆ ಚಿನ್ನದ ಆಭರಣ ಹಾಗೂ ಶ್ರೀ ಕೊರಗಜ್ಜ ದೈವಕ್ಕೆ ಚಿನ್ನದ ಮುಟ್ಟಾಲೆ ಸಮರ್ಪಿಸುವ ಪ್ರಯುಕ್ತ ಶ್ರೀ ಗುಳಿಗ ಹಾಗೂ ಕೊರಗಜ್ಜ ಸೇವಾ ಸಮಿತಿ ಆಶ್ರಯದಲ್ಲಿ ಅಸೈಗೋಳಿಯ ಬಂಟರಭವನದಲ್ಲಿ ಭಾನುವಾರ ನಡೆದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೇವಿ ಶಕ್ತಿ ಜೊತೆಗೆ ಮಾನವ ಶಕ್ತಿ ಜೊತೆ ಸೇರಿದಾಗ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಕರೂ ಒಟ್ಟು ಸೇರಿ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಶಾಂತಿಪಳಿಕೆ ವರ್ಕಾಡಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ ಭಂಡಾರಮನೆ ಅವರು ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು.
ಶ್ರೀ ಗುಳಿಗ ಕೊರಗಜ್ಜ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ರವಿ ರೈ ಪಜೀರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕೊರಗಜ್ಜ ಗುಳಿಗಜ್ಜ ದೈವದ ಕಾರಣಿಕ ತುಳುನಾಡು ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಇಂದು ತಿಳಿಯುವಂತಾಗಿದೆ. ತನುಮನ ಧನದ ಸಹಕಾರದೊಂದಿಗೆ ಜೀರ್ಣೋದ್ಧಾರ ಹಾಗೂ ಕ್ಷೇತ್ರದ ಅಭಿವೃದ್ಧಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಅಸೈಗೋಳಿ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನ ಟ್ರಸ್ಟಿ ಪ್ರಶಾಂತ್ ಕಾಜವ, ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ಸುರೇಶ್ ಚೌಟ, ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರಾದ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಬೊಳ್ಮ ಉಳ್ಳಾಲ್ತಿ ಕ್ಷೇತ್ರದ ಅಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಶ್ರೀನಿವಾಸ ಶೆಟ್ಟಿ ಪುಲ್ಲು,ಕೋಶಾಧಿಕಾರಿ ಶೈಲೇಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಗುಳಿಗ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರಾದ ಭಾಸ್ಕರ ಕೆ.ಗುಡ್ಡೆಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಆನಂದ ಅಸೈಗೋಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂದೀಪ್ ಅವರು ವಂದಿಸಿದರು.


