ತೊಕ್ಕೊಟ್ಟು: ಜೇನ ದನಿಯೋಳೆ ಮೀನ ಕಣ್ಣೋಳೆ, ಸೊಬಗೆ ಮೈತುಂಬಿದೆ…ಸದ್ಯ ಕನ್ನಡ ಸಿನಿಮಾದ ಈ ಹಾಡು ಭಾರೀ ಸುದ್ದಿಯಲ್ಲಿದೆ. ದ್ವಾಪರ ದಾಟುತ ನನ್ನನೇ ನೋಡಲು ನನ್ನನ್ನೇ ಸೇರಲು ಎಂಬ ಈ ಹಾಡನ್ನು ಕೇಳದವರೇ ಇಲ್ಲ ಎಂದರೂ ತಪ್ಪಾಗಲ್ಲ. ಈ ಹಾಡಿಗೆ ಧ್ವನಿಯಾಗಿ ಸಾಹಿತ್ಯಕ್ಕೆ ಜೀವ ತುಂಬಿದ ಗಾಯಕ ಜಸ್ಕರ್ ಸಿಂಗ್ ನಾಳೆ ಕಲ್ಲಾಪು ಕೊರಗಜ್ಜ ಸಾನಿಧ್ಯಕ್ಕೆ ಭೇಟಿ ನೀಡಲಿದ್ದಾರೆ.

ಹೌದು..ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಆಗಿ ವೈರಲ್ ಆಗುತ್ತಿರುವ ಹಾಡಿನಲ್ಲಿ ಸಖಿ ಸಖಿ ಅನ್ನೋ ಹಾಡು ಕೂಡ ಒಂದು.
ಗೊಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರದ ಈ ಹಾಡಿಗೆ ಸ್ಟೆಪ್ ನ ಹಾಕದವರೇ ಇಲ್ಲ. ರೀಲ್ಸ್ ಮಾಡದವರೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಈ ಹಾಡು ಪಾಪ್ಯುಲರಿಟಿಯನ್ನು ಪಡೆದಿದೆ. ಹಾಡು ಬಿಡುಗಡೆಯಾದ ದಿನವೇ ಲಕ್ಷಾಂತರ ಜನರ ಬಾಯಲ್ಲಿ ಹಾಗೂ ಮೊಬೈಲ್ ರಿಂಗ್ ಟೋನ್, ಕಾಲರ್ ಟೋನ್ ಆಗಿ ಈ ಹಾಡು ಸದ್ದು ಮಾಡಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿ ಬಂದ ಈ ಅದ್ಭುತ ಹಾಡಿಗೆ ಧ್ವನಿಯಾದವರು ಜಸ್ಕರ್ ಸಿಂಗ್. ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗಾಯಕ ಜಸ್ಕರ್ ಸಿಂಗ್. ಸದ್ಯ ಟ್ರೆಂಡ್ ಜೊತೆಗೆ ಸಿನಿಮಾದಲ್ಲಿ ಬ್ಯುಸಿ ಆಗಿರುವ ಇವರು ನಾಳೆ ಕರಾವಳಿಗೆ ಭೇಟಿ ನೀಡಲಿದ್ದಾರೆ. ಮೂಲತಃ ಪಂಜಾಬಿ ಆಗಿದ್ದರೂ ಕೂಡ ತುಳುನಾಡಿನ ದೈವಗಳ ಮೇಲಿನ ನಂಬಿಕೆಗೆ ಸಾಕ್ಷಿ ಎಂಬಂತೆ ನಾಳೆ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ಬುರ್ದುಗೋಳಿ ಕಲ್ಲಾಪು ಸಾನಿಧ್ಯಕ್ಕೆ ಬೆಳಿಗ್ಗೆ 10.30ಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಮೂಲಕ ತುಳುನಾಡಿನ ಕೊರಗಜ್ಜನ ಆಶೀರ್ವಾದ ಪಡೆಯಲಿದ್ದಾರೆ.


