UN networks
ಉಳ್ಳಾಲ: 10 ವರ್ಷಗಳ ಹಿಂದಿನ ಉತ್ತರಪ್ರದೇಶದ ಸ್ಥಿತಿ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ನಿರ್ಮಾಣವಾಗಿದೆ. ಅಭ್ಯರ್ಥಿಯೊಬ್ಬರಿಗೆ ಜೀವಬೆದರಿಕೆಯೊಡ್ಡಿ ನಾಮಪತ್ರ ಹಿಂಪಡೆಯುವಂತೆ ಮಾಡಿದ ಕಾಂಗ್ರೆಸ್ ಹಿಂಬಾಲಕರ ವಿರುದ್ಧ ಚುನಾವಣಾ ಆಯೋಗ ಕಾನೂನು ಕ್ರಮಕೈಗೊಂಡು ಉಳ್ಳಾಲದ ಮತದಾರರಲ್ಲಿ ಧೈರ್ಯ ತುಂಬಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.
ಪಂಡಿತ್ ಹೌಸ್ ನ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಸಂವಿಧಾನಕ್ಕೆ ಕುತ್ತು ಬರುವ ರೀತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವರ್ತಿಸಿದ್ದಾರೆ. ಇದರಿಂದ ಕ್ಷೇತ್ರದ ಮತದಾರರು ಭಯದಿಂದ ಪ್ರಜಾಪ್ರಭುತ್ವದ ಉತ್ಸವ ಮತದಾನದಲ್ಲಿ ಭಾಗವಹಿಸುವ ವಾತಾವರಣ ನಿರ್ಮಾಣವಾಗಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಚುನಾವಣಾ ಆಯೋಗ ಸುಮೋಟೊ ಕ್ರಮಕೈಗೊಳ್ಳಬೇಕು. ಇದರಿಂದ ಮತದಾರರಲ್ಲಿ ಧೈರ್ಯ ತುಂಬಲು ಸಾಧ್ಯ. ಮೊದಲ ಹಂತದ ಚುನಾವಣಾ ಪ್ರಚಾರ ಇಂದಿಗೆ ಮುಕ್ತಾಯಗೊಂಡಿದೆ. ಬಿಜೆಪಿಗೆ ಕ್ಷೇತ್ರದ ಉದ್ದಕ್ಕೂ ಅಭೂತಪೂರ್ವ ಬೆಂಬಲ ದೊರೆತಿದೆ. ಅಂಬ್ಲಮೊಗರು ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಬೆಂಬಲ ದೊರೆತಿದೆ. ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಬೇರೆ ಪಕ್ಷದ ನಾಯಕರು , ಕಾರ್ಯಕರ್ತರು ನಿರಂತರ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಅತ್ಯಧಿಕ ಮತ 15,000 ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಅನ್ನುವ ವಿಶ್ವಾಸವಿದೆ. ಕಾಂಗ್ರೆಸ್ಸಿನವರು ಸೋಲಿನ ಭೀತಿಯಿಂದ ಅಸಹನೆಯ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದರು.
ಈ ಸಂದರ್ಭ ಬಿಜೆಪಿ ಮುಖಂಡರುಗಳಾದ ಸಂತೋಷ್ ರೈ ಬೋಳಿಯಾರ್, ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಚೆನ್ನಪ್ಪ ಕೋಟ್ಯಾನ್, ಹೇಮಂತ್ ಶೆಟ್ಟಿ ದೇರಳಕಟ್ಟೆ, ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.


