UN networks
ಉಳ್ಳಾಲ: ಕ್ಷೇತ್ರದುದ್ದಕ್ಕೂ ಕಾಂಗ್ರೆಸ್ ಶಾಸಕರ ಆಡಳಿತ ವೈಫಲ್ಯದಿಂದ ಬೇಸತ್ತು ಕಾಂಗ್ರೆಸ್ ನಾಯಕರು- ಕಾರ್ಯಕರ್ತರು ಬಿಜೆಪಿ ಸೇರಲು ಉತ್ಸುಕರಾಗಿದ್ದು, ಇದರ ಮೊದಲ ಭಾಗವೆಂಬಂತೆ ಅಂಬ್ಲಮೊಗರುವಿನಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಇಂದು ಸೇರ್ಪಡೆಗೊಂಡಿದ್ದಾರೆ ಎಂದು ಉಳ್ಳಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಹೇಳಿದರು.
ಅವರು ಅಂಬ್ಲಮೊಗರುವಿನ ಕೋಟ್ರಗುತ್ತು ಕಾಂಗ್ರೆಸ್ ಮುಖಂಡ ಮೊಹಮ್ಮದ್ ಕುಂಞÂಮೋನು ಸಹಿತ ಕಾರ್ಯಕರ್ತರನ್ನು ಬಿಜೆಪಿಗೆ ಶಾಲುಹಾಕಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.


ಕ್ಷೇತ್ರದ ಶಾಸಕ ಸಚಿವನಾದರೂ ಊರಿಗೆ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ಗ್ರಾಮಾಂತರ ಭಾಗಗಳಲ್ಲಿ ಕೆಲಸ ಕಾರ್ಯಗಳಿಲ್ಲದೆ ಕಷ್ಟದಲ್ಲಿ ದಿನದೂಡುವ ಸ್ಥಿತಿಯಿದೆ. ಕೃಷಿ ಕಾರ್ಯಕ್ಕೆ ಪ್ರೋತ್ಸಾಹವೇ ಸಿಗುತ್ತಿಲ್ಲ, ಚಾಲಕನಾಗಿ ದುಡಿದರೂ ಮನೆ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಈ ಭಾಗದಲ್ಲಿ ದುಡಿಯುವಂತಹ ವಾತಾವರಣ ಇಲ್ಲದಾಗಿದೆ. ಬ್ಯಾನರ್ ಗಳಿಗೆ ಮಾತ್ರ ಸೀಮಿತವಾಗಿರುವ ಅಭಿವೃದ್ಧಿಯಿಂದ ಬೇಸತ್ತು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಈ ಸಂದರ್ಭ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮುಖಂಡರುಗಳಾದ ಸುಕೇಶ್ ಶೆಟ್ಟಿ, ಪ್ರವೀಣ್ ಆಳ್ವ, ಕಿಶೋರ್ ಪಂಡಿತ್ ಹೌಸ್ ಮೊದಲಾದವರು ಉಪಸ್ಥಿತರಿದ್ದರು.


